ನಿಂತಿದ್ದ ಖಾಲಿ ಕಾರಿಗೆ ಬಸ್​ ಡಿಕ್ಕಿ: ಚಾಲಕ ಸೇರಿ ಐವರು ದುರ್ಮರಣ, 25 ಮಂದಿಗೆ ಗಾಯ

Bus Accident
Published on

ಕನೌಜ್​: ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ರಸ್ತೆ ಬದಿ ಸುಮ್ಮನೇ ನಿಂತಿದ್ದ ಕಾರಿಗೆ​ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐದು ಮಂದಿ ಸಾವಿಗೀಡಾಗಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾನುವಾರ ಬೆಳಗ್ಗೆ ಆಗ್ರಾ-ಲಖನೌ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಸುಮಾರು 45 ಮಂದಿ ಕಾರ್ಮಿಕರನ್ನು ಹೊತ್ತು ಬಿಹಾರದ ಮಧುಬಾನಿ ಜಿಲ್ಲೆಯಿಂದ ದೆಹಲಿಗೆ ಬಸ್​ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯದಲ್ಲೇ ಭೀಕರ ಅಪಘಾತ ಸಂಭವಿಸಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಗೌರವ್​ ಶುಕ್ಲಾ ಎಂಬುವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಎರಡು ವಾಹನಗಳು ರಸ್ತೆಯ ಮೇಲೆ ಉರುಳಿಬಿದ್ದು ಜಖಂಗೊಂಡಿವೆ. ಬಸ್​ ಚಾಲಕ ಸೇರಿದಂತೆ ಐವರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಸ್ಥಳೀಯರು ಘಟನೆ ನಡೆದ ಪ್ರದೇಶಕ್ಕೆ ಆಗಮಿಸಿ ಬಸ್ಸಿನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದು, ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net