

Mali: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಅಶಾಂತಿ ಮುಂದುವರೆದಿದ್ದು, ವಿದ್ಯುದೀಕರಣ ಯೋಜನೆಯ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಭಾರತೀಯ ಮೂಲದ ಐವರು ಕಾರ್ಮಿಕರನ್ನು ಉಗ್ರರು ಅಪಹರಿಸಿದ್ದಾರೆ ಎಂದು ಕಂಪನಿ ಮತ್ತು ಭದ್ರತಾ ಮೂಲಗಳು ಹೇಳಿವೆ ಎಂದು ಶನಿವಾರ(ನ. 08) ವರದಿಯಾಗಿದೆ.
ಪಶ್ಚಿಮ ಮಾಲಿಯ ಕೊಬ್ರಿ ಬಳಿ ಗುರುವಾರ ಬಂದೂಕುಧಾರಿಗಳು ಕಾರ್ಮಿಕರನ್ನು ಅಪಹರಿಸಿದ್ದಾರೆ. ಅಲ್ ಖೈದಾ, ಐಸಿಸ್ ಸಂಬಂಧಿತ ಗುಂಪುಗಳಿಂದ ಅಶಾಂತಿ, ಜಿಹಾದಿ ಸಂಸ್ಕೃತಿ ಬೆಳೆಯುತ್ತಿದೆ ಎನ್ನಲಾಗಿದೆ. 2012ರಿಂದ ದಂಗೆಗಳು ಮತ್ತು ಸಂಘರ್ಷಗಳಿಂದ ದೇಶದಲ್ಲಿ ವಿದೇಶಿಯರನ್ನು ಗುರಿಯಾಗಿಸಿಕೊಂಡು ಅಪಹರಣಗಳು ಸಾಮಾನ್ಯವಾಗಿದೆ.
ಅಪಹರಣ ಕುರಿತು ಎಎಫ್ಪಿ ಜೊತೆ ಮಾತನಾಡಿರುವ ಕಂಪನಿಯ ಪ್ರತಿನಿಧಿಯೊಬ್ಬರು, ಐವರು ಭಾರತೀಯ ಪ್ರಜೆಗಳನ್ನು ಅಪಹರಣ ಮಾಡಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇತರ ಭಾರತೀಯರನ್ನು ರಾಜಧಾನಿ ಬಮಾಕೊಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಇದುವರೆಗೆ ಯಾವುದೇ ಗುಂಪು ನಾವೇ ಅಪಹರಣ ಮಾಡಿದ್ದೇವೆ ಎಂದು ಹೇಳಿಕೊಂಡಿಲ್ಲ. ಪ್ರಸ್ತುತ ಮಾಲಿಯಲ್ಲಿ ಮಿಲಿಟರಿ ಜುಂಟಾ ಆಳ್ವಿಕೆ ನಡೆಸುತ್ತಿದ್ದು, ಅಶಾಂತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದೆ. ಬಡ ದೇಶದಲ್ಲಿ ಭದ್ರತಾ ಪರಿಸ್ಥಿತಿಯು ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ.
ಇನ್ನೂ ಉಗ್ರರ ಗುಂಪುಗಳು ವಿದೇಶಿಯರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿವೆ ಎನ್ನಲಾಗಿದೆ. ಶುಕ್ರವಾರ(ನ. 07) ಫ್ರೆಂಚ್ ವಿದೇಶಾಂಗ ಸಚಿವಾಲಯ, ತನ್ನ ದೇಶದ ಪ್ರಜೆಗಳು ಭೂಮಾರ್ಗದ ಮೂಲಕ ಬದಲಾಗಿ ವಾಣಿಜ್ಯ ವಿಮಾನಗಳ ಮೂಲಕ ತಾತ್ಕಾಲಿಕವಾಗಿ ಮಾಲಿಯನ್ನು ತೊರೆಯುವಂತೆ ಸೂಚನೆ ನೀಡಿದೆ. (ಏಜೆನ್ಸೀಸ್)