

ಶಿವಮೊಗ್ಗ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅನೇಕ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂಬ ದೂರುಗಳ ನಡುವೆಯೇ ಜಿಲ್ಲೆಯಲ್ಲಿ ಐದು ಮಂದಿ ಸಮೀಕ್ಷೆದಾರರು ನಿಗದಿತ ಅವಧಿಗೂ ಮುನ್ನವೇ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ತಮಗೆ ನೀಡಿದ್ದ ಸಮೀಕ್ಷೆ ಗುರಿಯನ್ನು ಅವಧಿಗೂ ಮುನ್ನವೇ ಪೂರೈಸಿದ ಸಮೀಕ್ಷೆದಾರರಿಗೆ ಮಂಗಳವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಗೌರವಿಸಿದರು.
ಈ ವೇಳೆ ಮಾತನಾಡಿದ ಗುರುದತ್ತ ಹೆಗಡೆ, ಜಿಲ್ಲೆಯಲ್ಲಿ ಒಟ್ಟು 4.90 ಲಕ್ಷ ಮನೆಗಳನ್ನು ಗಣತಿ ಮಾಡಬೇಕೆಂದು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 1.70 ಲಕ್ಷ ಮನೆಗಳ ಗಣತಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 4,500 ಶಿಕ್ಷಕರನ್ನು ನಿಯೋಜಿಸಲಾಗಿದೆ. ಪ್ರತಿ ದಿನ 50-53 ಸಾವಿರ ಮನೆಗಳ ಸಮೀಕ್ಷೆ ಪೂರ್ಣವಾಗುತ್ತಿದೆ ಎಂದರು.
ಗಣತಿದಾರರು ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಓಟಿಪಿ ಕೇಳಿದಾಗ ಯಾರೂ ಹೆದರುವ ಅವಶ್ಯಕತೆಯಿಲ್ಲ. ಗಣತಿದಾರರು ಮನೆಗೆ ಬಂದಾಗ ಅವರ ಬಳಿ ಇರುವ ಗುರುತಿನ ಚೀಟಿಯನ್ನು ಸಾರ್ವಜನಿಕರು ಪರಿಶೀಲಿಸಿ ತಮ್ಮ ಭಯವನ್ನು ದೂರಾಗಿಸಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 60 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಜಿಲ್ಲಾಡಳಿತ ಸಮೀಕ್ಷೆಗೆ ಮಾಹಿತಿ ನೀಡುವಂತೆ ಯಾರ ಮೇಲೂ ಒತ್ತಡ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.