

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ಬ್ರಿಟಿಷ್ ಹೈಕಮೀಷನ್ ಸಹಭಾಗಿತ್ವದಲ್ಲಿ ಸ್ಥಾಪಿತವಾದ ‘ಚಿವೆನಿಂಗ್-ಕರ್ನಾಟಕ’ ಸ್ನಾತಕೋತ್ತರ ಪದವಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಐವರು ವಿದ್ಯಾರ್ಥಿನಿಯರನ್ನು ಸರ್ಕಾರದ ವತಿಯಿಂದ ಬೀಳ್ಕೊಡಲಾಯಿತು.
ರಾಜ್ಯ ಉನ್ನತ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಕರ್ನಾಟಕ- ಕೇರಳ ವಿಭಾಗದ ಬ್ರಿಟಿಷ್ ಡೆಪ್ಯುಟಿ ಹೈಕಮೀಷನರ್ ಚಂದ್ರು ಐಯ್ಯರ್ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು.
ಉನ್ನತ ಶಿಕ್ಷಣಕ್ಕೆ ಮೌಂಟ್ ಕಾರ್ಮೆಲ್ ಕಾಲೇಜಿನ ನಿಹಾರಿಕಾ ನರೇಶ್, ಬಿಎಂಎಸ್ ಕಾಲೇಜಿನ ಸುಷ್ಮಾ ಶ್ಯಾಮಸುಂದರ್, ಮೈಸೂರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಚಂದನಾ ಆಂಜನಪ್ಪ, ಕ್ರೈಸ್ಟ್ ವಿವಿಯ ಅಥೆನಾ ರೋಸ್ ಜೋಸ್ೆ ಮತ್ತು ಮೈಸೂರು ವಿವಿಯ ಶ್ವೇತಾ ನಾಗಪತಿ ಹೆಗಡೆ ಆಯ್ಕೆಯಾಗಿದ್ದಾರೆ. ಇವರು ಬ್ರಿಟನ್‌ನ ಯಾವುದೇ ವಿವಿಯಲ್ಲಿ ತಮ್ಮ ಆಯ್ಕೆಯ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮಾಡಬಹುದು. ಅದಕ್ಕೆ 40 ಲಕ್ಷ ರೂ.ಗಳನ್ನು ನೀಡಲಾಗುವುದು. ರಾಜ್ಯ ಸರ್ಕಾರ ಮತ್ತು ಬ್ರಿಟಿಷ್ ಹೈಕಮೀಷನ್‌ಗಳು ತಲಾ 10 ಲಕ್ಷ ರೂ. ಭರಿಸಲಿವೆ.
2025-26ನೇ ಸಾಲಿನ ಮೊದಲ ಬ್ಯಾಚ್ ಆಗಿದ್ದು, ರಾಜ್ಯದಿಂದ ಒಟ್ಟು ಸಲ್ಲಿಕೆಯಾಗಿದ್ದ 1,827 ಅರ್ಜಿಗಳಲ್ಲಿ 155 ಅನ್ನು ಅಂತಿಮಗೊಳಿಸಲಾಗಿತ್ತು. ಬಳಿಕ 20 ಮಂದಿಯ ಸಂದರ್ಶನ ನಡೆಸಿ, ಕಡೆಗೆ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ. ವಿದೇಶಿ ಶಿಕ್ಷಣದ ಯೋಜನೆ ಆರಂಭವಾಗಿ 40 ವರ್ಷವಾಗಿದೆ. ಕರ್ನಾಟಕದಿಂದ ಈವರೆಗೆ 214 ಮಂದಿ ಈ ಯೋಜನೆಯ ಲಾಭ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯರನ್ನು ಕಳುಹಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತೆ ಎನ್. ಮಂಜುಶ್ರೀ, ನಿರ್ದೇಶಕಿ ಶೋಭಾ, ಬ್ರಿಟಿಷ್ ಹೈ ಕಮಿಷನ್‌ನ ವಿದ್ಯಾರ್ಥಿವೇತನ ಮುಖ್ಯಸ್ಥೆ ಸುಪ್ರಿಯಾ ಚಾವ್ಲಾ, ಉಪ ಮುಖ್ಯಸ್ಥ ಓವೆನ್ ರಿಚರ್ಡ್ಸ್ ಮತ್ತು ಸಲಹೆಗಾರ ಕೆ.ಎಸ್. ಮಂಜುನಾಥ್ ಉಪಸ್ಥಿತರಿದ್ದರು.
ಮುಂದಿನ ಸಾಲಿನ ಅರ್ಜಿ ಸಲ್ಲಿಕೆಗೆ ಚಾಲನೆ 2026-27ನೇ ಸಾಲಿನ ಆಯ್ಕೆ ಪ್ರಕ್ರಿಯೆಗೆ ಸಚಿವ ಡಾ.ಎಂ.ಸಿ. ಸುಧಾಕರ್ ಚಾಲನೆ ನೀಡಿದರು. ಅಕ್ಟೋಬರ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಚೆವೆನಿಂಗ್-ಕರ್ನಾಟಕ ಸ್ಕಾಲರ್‌ಶಿಪ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಕಳುಹಿಸಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಮೊದಲ ಬ್ಯಾಚಿನಲ್ಲಿ ಖಾಸಗಿ ವಿವಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಈ ಕಾರ್ಯಕ್ರಮವು ಬಳಕೆಯಾಗಲಿ ಮತ್ತು ಯುಕೆಯಿಂದ ಹಿಂದುರುಗಿದ ನಂತರ ದೇಶಕ್ಕೂ ಕೊಡುಗೆ ನೀಡಲಿ. ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ ಪರಿಸರದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಪ್ಪಿಸುವುದು ಒಳಗೊಂಡಂತೆ ಜನರಲ್ಲಿ ವಿಜ್ಞಾನದ ವಿಷಯದಲ್ಲಿ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿದೆ. ಇದೇ ವಿಷಯವಾಗಿ ವ್ಯಾಸಂಗ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. -ಶ್ವೇತಾ ನಾಗಪತಿ ಹೆಗಡೆ, ಮೈಸೂರು