ಮಹರ್ಷಿ ಅರವಿಂದರ ಐದು ಕನಸುಗಳು; ಆ.15ರಂದು 150ನೇ ಜನ್ಮ ದಿನೋತ್ಸವ

Aravinda
Published on

ಹತ್ತೊಂಬತ್ತನೇ ಶತಮಾನದಲ್ಲಿ ಭಾರತ ಕಂಡ ಪರಮಶ್ರೇಷ್ಠ ತತ್ವಜ್ಞಾನಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಚಿಂತಕರು ಅರವಿಂದರು. ಅವರದು ಭೂಸದೃಶ ವ್ಯಕ್ತಿತ್ವ. ಅವರ ಭವ್ಯ ಜೀವನದ ಪಥ ಲೋಕೋತ್ತರವಾದುದು. ಅನುಭವ, ಅನುಭಾವದ ತಾತ್ವಿಕ ಚಿಂತನ ಮಾರ್ಗದಲ್ಲಿ ಮೂಡಿಬಂದ ಅವರ ವಿಚಾರಧಾರೆಗಳು ಬದುಕಿನ ಅನೂಹ್ಯ ದರ್ಶನ ಮಾಡಿಸುತ್ತವೆ. ‘ಅರವಿಂದರ ಅವ್ಯಕ್ತ ಆಧ್ಯಾತ್ಮಿಕ ಚೇತನದ ಮಾತಿರಲಿ, ಅತ್ಯಲ್ಪ ಪ್ರಮಾಣದಲ್ಲಿಯಾದರೂ ಅವರ ವಾšಯ ಶರೀರದ ಸಾಧನೆಯ ಈಷತ್ ಪರಿಚಯ ಮಾಡಿಕೊಳ್ಳುವುದೆಂದರೆ ಸಾಗರ ಪರ್ಯಟನ, ಹಿಮಾಲಯ ಪ್ರವಾಸಗಳನ್ನು ಒಟ್ಟಿಗೆ ಕೈಗೊಂಡಂತೆ!’ ಎನ್ನುವ ಮಹಾಕವಿ ಕುವೆಂಪು ಅವರ ಮಾತುಗಳು ಅರವಿಂದರ ಮಹೋನ್ನತ ಜೀವನಮಾರ್ಗವನ್ನು ಅನಾವರಣಗೊಳಿಸುತ್ತವೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಕಂಕಣಬದ್ಧರಾದ ಅರವಿಂದರು ಭಾರತೀಯ ಜನಾಂಗವನ್ನು ಜಾಗೃತಗೊಳಿಸಿ, ಅವರಲ್ಲಿ ಭಾರತೀಯತೆಯನ್ನು ಉದ್ದೀಪನಗೊಳಿಸಿದರು. ದಾಸ್ಯದಿಂದ ಇಡೀ ಮನುಕುಲದ ಅವನತಿ ಆಗುವುದೆಂದು ಎಚ್ಚರಿಸಿದ ಅವರು, ಸ್ವತಃ ಸ್ವಾತಂತ್ರ್ಯಯೋಧರಾಗಿ ಮಾಡಿದ ಕಾರ್ಯ ಶ್ಲಾಘನೀಯವಾದುದು. ಅಷ್ಟೇ ಅಲ್ಲದೆ, ಅವರು ಭಾರತದ ತತ್ವಜ್ಞಾನವನ್ನು ವಿಶ್ವಕ್ಕೆ ಕೊಡುಗೆ ಕೊಟ್ಟ ಮಹನೀಯರಲ್ಲಿ ಅಗ್ರಗಣ್ಯರು. ಮಾನವನ ಬದುಕಿನಲ್ಲಿ ದೈವೀಕತಡ ಬಂದು ನೆಲೆಸುವುದನ್ನು ಬಯಸಿದ ಅವರು ಆತ್ಮೋನ್ನತಿಗಾಗಿ ಮಾನವಕುಲ ಒಂದಾಗಿ, ಮೃಗತ್ವವು ನಾಶವಾಗಿ ಮರ್ತಯ ಪರತತ್ವ ಪ್ರತಿಷ್ಠಾಪನೆಯಾಗಬೇಕು ಎಂದಿದ್ದಾರೆ. ಈ ವಿಚಾರಗಳನ್ನು ಅವರ ಲೈಫ್ ಡಿವೈನ್, ಸಾವಿತ್ರಿ, ಯೋಗ ಸಮನ್ವಯ, ಗೀತಾಪ್ರಬಂಧ, ಮಾನವ ಚಕ್ರ, ವೇದ ರಹಸ್ಯ, ಅಗ್ನಿಸೂತ್ರಗಳು ಮುಂತಾದ ಗ್ರಂಥ ಮತ್ತು ದಾಖಲೆಗಳಲ್ಲಿ ಕಾಣಬಹುದಾಗಿದೆ.

ಇಂದು ರಾಷ್ಟ್ರೀಯ ಸಮ್ಮೇಳನ: ಅರವಿಂದರ 150ನೇ ಜನ್ಮ ಮಹೋತ್ಸವದ ಅಂಗವಾಗಿ ಶ್ರೀ ಅರಬಿಂದೊ ಕಾಂಪ್ಲೆಕ್ಸ್ ಟ್ರಸ್ಟ್, ಶ್ರೀ ಅರಬಿಂದೊ ಸೊಸೈಟಿ ಸ್ಟೇಟ್ ಕಮಿಟಿ ವತಿಯಿಂದ ‘ಅರವಿಂದರ ವಿಚಾರಗಳ ಬೆಳಕಿನಲ್ಲಿ ಭಾರತದ ಪುನರುತ್ಥಾನ ಮತ್ತು ಭಾರತೀಯ ರಾಷ್ಟ್ರವಾದ’ ಕುರಿತಂತೆ ಒಂದು ದಿನದ ರಾಷ್ಟ್ರಿಯ ಸಮ್ಮೇಳನವನ್ನು ಆಗಸ್ಟ್ 7ರಂದು ಬೆಂಗಳೂರಿನ ನಿಮ್ಹಾನ್ಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಇಂತಹ ಮಹಾತತ್ವಜ್ಞಾನಿ ತಾಯ್ನಾಡು ಹಾಗೂ ಜಗತ್ತಿನ ಉದ್ಧಾರಕ್ಕಾಗಿ ಕಂಡ ಐದು ಕನಸುಗಳ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೋಣ.
  1. ಸ್ವತಂತ್ರ ಮತ್ತು ಸಂಯುಕ್ತ ಭಾರತವನ್ನು ನಿರ್ವಣಗೊಳಿಸಬಲ್ಲ ಕ್ರಾಂತಿಕಾರಕ ಆಂದೋಲನ ಆಗಬೇಕೆಂಬುದು ಅವರ ಮೊದಲ ಕನಸು. ಭಾರತವು ಸ್ವತಂತ್ರವಾಗಿದೆ. ಆದರೆ, ಐಕ್ಯತೆಯನ್ನು ಪಡೆಯಲಾಗಲಿಲ್ಲ. ಆದರೆ, ಐಕ್ಯತೆಯನ್ನು ಸಾಧಿಸಿಯೇ ತೀರಬೇಕು. ಏಕೆಂದರೆ, ಭಾರತದ ಭವಿಷ್ಯದ ಘನತೆಗಾಗಿ ಇದು ಬಹಳ ಅವಶ್ಯಕವಾಗಿದೆ.
  2. ಏಷ್ಯಾ ಖಂಡದ ಜನರುಗಳ ಬಂಧಮುಕ್ತತೆ ಮತ್ತು ಪುನರುತ್ಥಾನಗಳು ಅವರ ಎರಡನೆಯ ಕನಸಾಗಿತ್ತು. ಮಾನವ ಕುಲದ ಸಭ್ಯತೆಯ ಅಭ್ಯುದಯದ ವಿಷಯದಲ್ಲಿ ಮತ್ತೆ ತನ್ನ ಮೊದಲಿನ ಮಹತ್ವದ ಪಾತ್ರವನ್ನು ವಹಿಸಬೇಕೆಂಬುದಾಗಿತ್ತು. ಏಷ್ಯಾದ ಬಹುಭಾಗಗಳು ಸ್ವತಂತ್ರವಾಗಿವೆ, ಇಲ್ಲವೇ ಬಿಡುಗಡೆ ಹೊಂದುತ್ತಲಿವೆ. ಹೀಗೆ ಬಂಧಮುಕ್ತ ಭಾಗಗಳು ಸ್ವತಂತ್ರವಾಗಿ ತಮ್ಮ ಏಳಿಗೆಗಾಗಿ ಶ್ರಮಿಸಿ ಪುನರುತ್ಥಾನಗೊಳ್ಳುವುದು ಅರವಿಂದರ ಮಹದಾಶಯವಾಗಿತ್ತು.
  3. ಜಾಗತಿಕ ಏಕೀಕರಣ ಅವರ ಮೂರನೆಯ ಕನಸು. ಅಖಂಡ ಮಾನವ ಕುಲದ ನ್ಯಾಯಬದ್ಧ, ಉಜ್ವಲವಾದ ಮತ್ತು ಉದಾತ್ತವಾದ ಬಾಹ್ಯ ಆಧಾರವಾಗಿ ಇರಬಲ್ಲ ಜಾಗತಿಕ ಸ್ವರೂಪದ ಒಕ್ಕೂಟದ ರಚನೆಯಾಗಬೇಕೆಂಬುದು ಅರವಿಂದರ ಆಶಯವಾಗಿತ್ತು. ಏಕೀಕರಣದ ಹೊಸ ಆವೇಶವು ಇಡೀ ಮಾನವ ಜನಾಂಗವನ್ನೇ ಆವರಿಸಿಕೊಳ್ಳಬಹುದೆಂಬುದು ಅವರ ನಿರೀಕ್ಷೆಯಾಗಿತ್ತು.
  4. ಭಾರತದ ಆಧ್ಯಾತ್ಮಿಕತೆಯು ವಿಶ್ವದಾದ್ಯಂತ ಪಸರಿಸುವುದು ಅರವಿಂದರ ನಾಲ್ಕನೆಯ ಕನಸು. ಭಾರತದ ಅಧ್ಯಾತ್ಮ ಜ್ಞಾನವು ಪೌರಾತ್ಯ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ದಿನದಿನಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸುತ್ತಲಿದ್ದು, ಅದು ಇಡೀ ವಿಶ್ವವನ್ನು ವ್ಯಾಪಿಸುವುದು ಅವರ ಆಶಯವಾಗಿತ್ತು. ಆಧ್ಯಾತ್ಮಿಕತೆಯ ತವರೂರಾದ ಭಾರತವು ಧ್ಯಾನ, ಯೋಗಗಳಿಂದ ಕೂಡಿದ ಆಧ್ಯಾತ್ಮಿಕ ಚಿಂತನೆಯನ್ನು ಇಡೀ ಮಾನವಕುಲಕ್ಕೆ ಅರಿವು ಮೂಡಿಸಬೇಕೆಂಬುದು ಅವರ ಧ್ಯೇಯವಾಗಿತ್ತು.
  5. ಅರವಿಂದರ ಕೊನೆಯ ಕನಸು ವೈಯಕ್ತಿಕ ಪರಿಪೂರ್ಣತೆ ಹಾಗೂ ಸಾಮಾಜಿಕ ಪರಿಪೂರ್ಣತೆಯನ್ನು ಸಾಧಿಸುವುದಾಗಿದೆ. ಅದಕ್ಕಾಗಿ ಸುಪ್ತಮಾನಸ ಪ್ರಜ್ಞೆಯ ಅನಾವರಣವಾಗಬೇಕು, ತನ್ಮೂಲಕ ಮಾನವ ಉಚ್ಚತರ, ವಿಶಾಲತರ ಚೇತನನಾಗಿ ಬೆಳೆಯಬೇಕು. ಪ್ರಗತಿ ಹಾಗೂ ಕಳಂಕರಹಿತ ಸಮಾಜ ಸ್ಥಾಪಿಸುವ ಸ್ವಪ್ನವನ್ನು ಕಾಣಲು ಆರಂಭಿಸಿದಂದಿನಿಂದಲೂ ಅವನನ್ನು ಬಾಧಿಸಿದ, ಪೀಡಿಸಿದ ಸಮಸ್ಯೆಗಳಿಂದ ಸಮಾಜವನ್ನು ಮುಕ್ತಗೊಳಿಸಬೇಕು.

ಈ ಕನಸುಗಳೊಂದಿಗೆ ಅವರೇ ಹೇಳಿದಂತೆ ಮೂರು ಹುಚ್ಚುಗಳು ಅವರನ್ನು ಆವರಿಸಿತ್ತು.

ಮೊದಲನೆಯದು, ಅವರಿಗೆ ಭಗವಂತನು ದಯಪಾಲಿಸಿದ ಪಾಂಡಿತ್ಯ, ಪ್ರತಿಭೆ, ಉಚ್ಚ ಶಿಕ್ಷಣ, ವಿದ್ಯಾರ್ಜನೆ ಮತ್ತು ಸಂಪತ್ತು ಇವೆಲ್ಲವೂ ಅವನವೇ ಎಂಬುದರಲ್ಲಿ ಅವರಿಗೆ ದೃಢವಾದ ನಂಬಿಕೆಯಿತ್ತು. ಕುಟುಂಬ ನಿರ್ವಹಣೆ ಮತ್ತು ಅತಿ ಅವಶ್ಯವಿರುವ ಉದ್ದೇಶಗಳಿಗಾಗಿ ಮಾತ್ರ ಹಣವನ್ನು ಖರ್ಚು ಮಾಡಲು ಅಧಿಕಾರವಿದೆ. ಉಳಿದುದೆಲ್ಲವನ್ನೂ ಭಗವಂತನಿಗೇ ಹಿಂತಿರುಗಿಸಬೇಕೆಂಬುದು ಅವರ ನಿಲುವಾಗಿತ್ತು. ಬಂದದು ಬರಲಿ, ಯಾವುದೇ ಮಾರ್ಗದಿಂದಾಗಲಿ ಭಗವಂತನ ಪ್ರತ್ಯಕ್ಷ ಸಾಕ್ಷಾತ್ಕಾರ ಪಡೆಯಬೇಕೆಂಬುದು ಅವರ ಎರಡನೆಯ ಹುಚ್ಚು. ಧರ್ಮವೆಂದರೆ ಪದೇಪದೆ ದೇವರ ನಾಮಗಳನ್ನು ಪುನರುಚ್ಚರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರ ಎದುರಿನಲ್ಲಿ ಪ್ರಾರ್ಥನೆ ಸಲ್ಲಿಸುವುದು ಮತ್ತು ತಾವೆಷ್ಟು ಧಾರ್ವಿುಕರಾಗಿದ್ದೇವೆಂಬುದನ್ನು ಜನರಿಗೆ ತೋರಿಸಿಕೊಡುವುದು ಅಲ್ಲ. ಭಗವಂತನು ಇದ್ದುದೇ ಆದರೆ ಆತನ ಅಸ್ತಿತ್ವವನ್ನು ಅನುಭವದಿಂದ ಅರಿತು ಆತನ ಸಾನ್ನಿಧ್ಯವನ್ನು ಕಂಡುಕೊಳ್ಳಲು ನೆರವಾಗಬಲ್ಲ ಮಾರ್ಗ ಅನುಸರಿಸುವುದು.

ಮೂರನೆಯ ಹುಚ್ಚು: ತಮ್ಮ ದೇಶವೆಂದರೆ ಹುಲ್ಲುಗಾವಲುಗಳು, ಹೊಲಗಳು, ಕಾಡುಗಳು, ಪರ್ವತ, ನದಿಗಳಿರುವ ಜಡದ್ರವ್ಯದ ತುಣುಕುಗಳೆಂದು ಭಾವಿಸದೆ ಅದನ್ನು ಮಾತೃಸ್ವರೂಪವೆಂದು ಭಾವಿಸಿ ಪೂಜಿಸುವುದು, ಗೌರವಿಸುವುದು. ಪರದಾಳಿಯಿಂದ ಅಧೋಗತಿಗಿಳಿದಿರುವ ಜನಾಂಗವನ್ನು ಮೇಲಕ್ಕೆತ್ತುವ, ಮುಕ್ತಗೊಳಿಸುವ ಶಕ್ತಿ ತಮಗಿದ್ದು, ಅದನ್ನು ದೈಹಿಕ ಶಕ್ತಿ ಹಾಗೂ ಖಡ್ಗ-ಬಂದೂಕುಗಳಿಂದ ಯುದ್ಧ ಮಾಡದೇ ಜ್ಞಾನಬಲದಿಂದ ಸಾಧಿಸುವುದು.

ಶ್ರೇಷ್ಠ ಶಿಕ್ಷಣತಜ್ಞ, ಅಪ್ರತಿಮ ದೇಶಭಕ್ತ, ಮಹಾನ್ ಯೋಗಿ, ದಿವ್ಯಚೇತನರಾದ ಅರವಿಂದರು ಕಂಡಂತಹ ಈ ಮಹಾನ್ ಕನಸುಗಳ ಸಾಕಾರಕ್ಕಾಗಿ ದುಡಿಯುವುದು ನಾಡಿನ ಪ್ರಜೆಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಸುಸಂದರ್ಭವು ಅವರ 150ನೇ ಜನ್ಮಮಹೋತ್ಸವ ಮಾತ್ರವಲ್ಲದೆ, ಭಾರತಮಾತೆಯ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವೂ ಆಗಿರುವುದು ನಮ್ಮೆಲ್ಲರ ಸೌಭಾಗ್ಯ.

ಆಯ್ದ ಭಾಗಗಳ ಸಂಗ್ರಹ: ಶಾರದಾಂಬ ಸಿ.ಆರ್., ಪ್ರಾಂಶುಪಾಲರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net