ಒಬ್ಬನೇ ವ್ಯಕ್ತಿಗೆ ಕರೊನಾ ಲಸಿಕೆಯ ಐದು ಡೋಸ್!

vac
Published on

ಸಿಂಗಪುರ್: ಸಿಂಗಪುರಿನಲ್ಲಿ ಓರ್ವ ಆರೋಗ್ಯ ಸೇವಾ ಸಿಬ್ಬಂದಿಗೆ ಕರೊನಾ ಲಸಿಕೆಯ ಐದು ಡೋಸ್​ಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ತಪ್ಪಿನ ಅರಿವಾದ ಆರೋಗ್ಯ ಕೇಂದ್ರವು ಆತನ ದೇಹಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಈವರೆಗೂ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎನ್ನಲಾಗಿದೆ.

2020ರ ಡಿಸೆಂಬರ್ 30 ರಿಂದ ಸಿಂಗಪುರ್​ನಲ್ಲಿ ವೈದ್ಯರು ಮತ್ತು ಆರೋಗ್ಯ ಸೇವಾ ಸಿಬ್ಬಂದಿಗೆ ಆದ್ಯತೆ ನೀಡಿ ಕರೊನಾ ಲಸಿಕೆ ಅಭಿಯಾನ ಆರಂಭವಾಗಿದೆ. ಫೈಜರ್ ಮತ್ತು ಬಯೋಎನ್​ಟೆಕ್​ನ ಕರೊನಾ ಲಸಿಕೆಗಳನ್ನು ಅಲ್ಲಿ ಬಳಸಲಾಗುತ್ತಿದೆ. ಈ ಅಭಿಯಾನದ ಅಂಗವಾಗಿ ಜನವರಿ 14 ರಂದು ಸಿಂಗಪುರ್ ನಾಷನಲ್ ಐ ಸೆಂಟರ್(ಎಸ್​ಎನ್ಇಸಿ)ನ ಓರ್ವ ಸಿಬ್ಬಂದಿಗೆ ಕರೊನಾ ಲಸಿಕೆ ನೀಡುವಾಗ ಈ ಪ್ರಮಾದ ನಡೆದಿದೆ ಎನ್ನಲಾಗಿದೆ.

ಫೈಜರ್ ಕರೊನಾ ಲಸಿಕೆಯನ್ನು ಡೈಲ್ಯೂಟ್ ಮಾಡುವ ಜವಾಬ್ದಾರಿ ಹೊಂದಿದ್ದ ಉದ್ಯೋಗಿಯು ಲಸಿಕೆಯನ್ನು ನೀಡಲು ಸಿದ್ಧಗೊಳಿಸುತ್ತಿರುವಾಗ ಮತ್ತೊಂದೆಡೆಗೆ ಕೆಲಸದ ಮೇಲೆ ಕರೆಯಲಾಗಿದೆ. ಆ ಸಮಯದಲ್ಲಿ ಮತ್ತೊಬ್ಬ ಸಿಬ್ಬಂದಿಯು ಡೈಲ್ಯೂಟ್ ಮಾಡಿಲ್ಲದ ಡೋಸ್​ಅನ್ನು ನೀಡಲು ಸಿದ್ಧವಾದ ವಯಲ್​ನಲ್ಲಿ ಇಟ್ಟುಬಿಟ್ಟಿದ್ದಾರೆ. ಹಾಗೆ ಇಟ್ಟ ಐದು ಡೋಸ್​ಗಳಿಗೆ ಸಮನಾದ ಔಷಧಿಯನ್ನೇ ಎಸ್​ಎನ್​ಇಸಿ ಸಿಬ್ಬಂದಿಯೊಬ್ಬರಿಗೆ ನೀಡಲಾಗಿದೆ. ಕೆಲವು ಕ್ಷಣಗಳ ನಂತರ ವಾಪಸ್ ಬಂದ ಮೊದಲನೇ ಸಿಬ್ಬಂದಿಯು ವಿಚಾರಿಸಲಾಗಿ ಈ ತಪ್ಪು ನಡೆದಿರುವುದು ಬೆಳಕಿಗೆ ಬಂದಿದೆ.

"ತಕ್ಷಣ ಹಿರಿಯ ವೈದ್ಯರಿಗೆ ವಿಷಯ ತಿಳಿಸಲಾಯಿತು. ಅಧಿಕ ಡೋಸ್​ನ ಲಸಿಕೆ ಪಡೆದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಆತ ಯಾವುದೇ ರಿಯಾಕ್ಷನ್ ಅಥವಾ ಸೈಡ್ ಎಫೆಕ್ಟ್ ಇಲ್ಲದೆ ಆರೋಗ್ಯವಾಗಿರುವುದು ಕಂಡುಬಂತು." ಎಂದು ಎಸ್​ಎನ್​ಇಸಿ ತಿಳಿಸಿದೆ ಎನ್ನಲಾಗಿದೆ. ಆ ವ್ಯಕ್ತಿಯನ್ನು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದು, ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಈಗಲೂ ಸಹ ಆತನ ಆರೋಗ್ಯದ ಮಾಹಿತಿ ಪಡೆಯುತ್ತಿದ್ದು, ಆರೋಗ್ಯವಾಗೇ ಇದ್ದಾನೆ ಎನ್ನಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net