ಬೆಂಗಳೂರಿನಲ್ಲಿ ತಾಯಿಯನ್ನು ಕೊಂದು, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ: 17 ವರ್ಷದ ಮಗಳು ಸೇರಿ ಐವರ ಬಂಧನ| Murder

ವಿಜಯವಾಣಿ - 2025-11-01T081911.623
Published on

ಬೆಂಗಳೂರು: 17 ವರ್ಷದ ಬಾಲಕಿಯೊಬ್ಬಳು ತನ್ನ ಸ್ವಂತ ತಾಯಿಯನ್ನೇ ಸ್ನೇಹಿತರೊಂದಿಗೆ ಸೇರಿ ಕೊಲೆಗೈದು(Murder), ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗಳು ಸೇರಿ ಆಕೆಯ ಐವರು ಸ್ನೇಹಿತರನ್ನು ಬಂಧಿಸಿದ್ದಾರೆ ಎಂದು ಶುಕ್ರವಾರ(ಅ. 31) ವರದಿಯಾಗಿದೆ.

ಅ. 25ರಂದು ಈ ಘಟನೆ ನಡೆದಿದೆ. ನೇತ್ರಾವತಿ (35) ಕೊಲೆಯಾಗಿರುವ ತಾಯಿ. ಸಾಲ ವಸೂಲಾತಿ ಸಂಸ್ಥೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ತಾಯಿ ತೀರಿಕೊಂಡ ಸ್ವಲ್ಪ ಸಮಯದ ಬಳಿಕ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಇದರಿಂದ ನೇತ್ರಾವತಿಯ ಸಹೋದರಿ ಅನುಮಾನಗೊಂಡು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಬಳಿಕ ಇದು ಕೊಲೆ ಅಂತ ತಿಳಿದು ಬಂದಿದ್ದು,ಕೊಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ವೇಳೆ ಅಪ್ರಾಪ್ತ ವಯಸ್ಕರು ನೇತ್ರಾವತಿಯನ್ನು ಟವಲ್‌ನಿಂದ ಕತ್ತು ಹಿಸುಕಿ ಕೊಂದು, ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಸೀರೆಯಿಂದ ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ನೇತ್ರಾವತಿ ಇತ್ತೀಚೆಗೆ ತನ್ನ ಮಗಳು ತಮ್ಮ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಹುಡುಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂದು ಅನುಮಾನಗೊಂಡಿದ್ದಳು. ಮತ್ತು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವನಿಂದ ದೂರ ಇರುವಂತೆ ಎಚ್ಚರಿಸಿದ್ದಳು ಎಂದು ತಿಳಿದು ಬಂದಿದೆ. ಈ ಕಾರಣಕ್ಕಾಗಿಯೇ ಕೊಲೆ ನಡೆದಿದೆ. ಕೊಲೆಯಲ್ಲಿ ಆ ಹುಡುಗಿಯೇ ಭಾಗಿಯಾಗಿದ್ದಳು. ಒಂದೇ ದಿನ ಮನೆಯಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾಗ ಆಕೆಯ ಗೆಳೆಯನಿಂದ ಈ ಸಂಚು ರೂಪಿಸಲ್ಪಟ್ಟಿತ್ತು ಎಂದು ಹೇಳಿದ್ದಾರೆ.

ಇನ್ನೂ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಬಾಲಕಿ ಸೇರಿ ಆಕೆಯ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net