

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಶ್ರೀಕೃಷ್ಣನ ಸೇವಾ ಕೈಂಕರ್ಯದಲ್ಲಿ ನಿರತ ಪುತ್ತಿಗೆ ಮಠವು ಪರ್ಯಾಯ ಕೈಗೊಂಡು ಜ.18ಕ್ಕೆ ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದಲ್ಲಿ ಶನಿವಾರ ಸಂಭ್ರಮ ಆಚರಿಸಲಾಯಿತು.
ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ 2023ರ ಜ.18ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ತಮ್ಮ ಚತುರ್ಥ ಪರ್ಯಾಯ ಸ್ವೀಕರಿಸಿ, ಸರ್ವಜ್ಞ ಪೀಠ ಅಲಂಕರಿಸಿದ್ದರು. ಪರ್ಯಾಯದ ವಾರ್ಷಿಕೋತ್ಸವದ ನಿಮಿತ್ತ ಸುಶ್ರೀಂದ್ರ ಶ್ರೀಗಳು ಉಡುಪಿ ಕೃಷ್ಣನನ್ನು ದ್ವಿತೀಯ ವರ್ಷಕ್ಕೆ ಡೊಗ್ಗಾಲಿಡುತ್ತಿರುವ ಕುಸುಮಾಕರ, ಸುಮಸುಂದರ ಕೃಷ್ಣನಾಗಿ ಅಲಂಕಾರ ಮಾಡಿದ್ದರು.
ಗೀತಾಮಂದಿರದಲ್ಲಿ ಮಾಧ್ಯಮದವರೊಂದಿಗೆ ಸುಗುಣೇಂದ್ರ ಶ್ರೀಗಳು ಮಾತನಾಡಿ, ಲಕ್ಷಾಂತರ ಜನರು ಈಗಾಗಲೇ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿದ್ದು, ಈವರೆಗೆ ಸುಮಾರು 25 ಸಾವಿರದಷ್ಟು ಜನರು ಬರೆದ ಪುಸ್ತಕವನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾರೆ. ಈ ಬಾರಿ ಲಕ್ಷಾಂತರ ಜನ ಉಡುಪಿಗೆ ಬಂದು ಸಮರ್ಪಣೆ ಮಾಡಲಿದ್ದು, ತನ್ನಿಮಿತ್ತ ಸಮಾರಂಭವೂ ನಡೆಯಲಿದೆ. ಈ ವರ್ಷ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಆಯೋಜಿಸುವ ಸಂಕಲ್ಪ ಮಾಡಿದ್ದೇವೆ. ಅಲ್ಲದೆ, 2ನೇ ವರ್ಷದ ಪರ್ಯಾಯದಲ್ಲಿ 12 ಬಗೆಯ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿದೆ ಎಂದರು.
ರಥಬೀದಿಯಲ್ಲಿ ಜನದಟ್ಟಣೆ, ನೂಕುನುಗ್ಗಲು ನಿವಾರಿಸಲು ರಿಂಗ್ ರೋಡ್ ಮಾದರಿಯಲ್ಲಿ ಪರ್ಯಾಯ ರಸ್ತೆಯ ನಿರ್ಮಾಣದ ಹಾಗೂ ಕಾಶಿ ಮಾದರಿಯಲ್ಲಿ ಉಡುಪಿ ಕಾರಿಡಾರ್ ಮಾಡುವ ಕಲ್ಪನೆ ಹಾಗೂ ಸಂಕಲ್ಪವೂ ಇದ್ದು, ಉಡುಪಿ ನಗರಸಭೆಯ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಮಠದ ದಿವಾನ ನಾಗರಾಜ್ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇದ್ದರು.