

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾದ ಆಚರಣೆಗಳು ಅದ್ದೂರಿಯಾಗಿ ಸಾಗುತ್ತಿದ್ದು, ಇದೀಗ ಇಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯಲ್ಲಿ ಇರಿಸಲಾದ ದೇವರ ಮೂರ್ತಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಜನವರಿ 22ರಂದು ನಡೆಯಲಿರುವ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಮೊದಲು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ರಾಮಲಲ್ಲಾನ ವಿಗ್ರಹದ ಮೊದಲ ದೃಶ್ಯಗಳು ಅನಾವರಣಗೊಂಡಿದ್ದು, ವಿಗ್ರಹವನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ.
ಗುರುವಾರ ಮುಂಜಾನೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಪೂರ್ವಭಾವಿಯಾಗಿ ಆಚರಣೆಗಳ ಭಾಗವಾಗಿ ಗರ್ಭಗುಡಿಯೊಳಗೆ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆಯಲ್ಲಿ ಅರಳಿದ 51 ಇಂಚಿನ ವಿಗ್ರಹವನ್ನು ಗುರುವಾರ ನಸುಕಿನಲ್ಲಿ ದೇವಸ್ಥಾನಕ್ಕೆ ತರಲಾಯಿತು.
ಪ್ರಾರ್ಥನೆಯ ಪಠಣದ ನಡುವೆ ಈ ಕಾರ್ಯವನ್ನು ಮಾಡಲಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದ್ದು, "ಪ್ರಧಾನ ಸಂಕಲ್ಪ"ದ ಹಿಂದಿನ ಕಲ್ಪನೆಯೆಂದರೆ, ಭಗವಾನ್ ರಾಮನ 'ಪ್ರತಿಷ್ಠೆ'ಯನ್ನು ಎಲ್ಲರ ಕಲ್ಯಾಣಕ್ಕಾಗಿ, ರಾಷ್ಟ್ರದ ಕಲ್ಯಾಣಕ್ಕಾಗಿ, ಮಾನವೀಯತೆಯ ಕಲ್ಯಾಣಕ್ಕಾಗಿ ಮತ್ತು ಈ ಕೆಲಸಕ್ಕೆ ಕೊಡುಗೆ ನೀಡಿದವರಿಗಾಗಿ ಮಾಡಲಾಗುತ್ತಿದೆ. ಬ್ರಾಹ್ಮಣರಿಗೂ ವಸ್ತ್ರಗಳನ್ನು ನೀಡಲಾಯಿತು ಮತ್ತು ಎಲ್ಲರಿಗೂ ಕೆಲಸವನ್ನು ವಹಿಸಲಾಯಿತು ಎಂದು ಹೇಳಿದರು,(ಏಜೆನ್ಸೀಸ್).