

ಆಂಧ್ರಪ್ರದೇಶ: ನಟಸಿಂಹ ನಂದಮೂರಿ ಬಾಲಕೃಷ್ಣ ಎಂದೇ ಖ್ಯಾತರಾದ ನಟ ಬಾಲಯ್ಯ ಅಭಿನಯದ ಬಹುನಿರೀಕ್ಷಿತ ಚಿತ್ರ 'ಭಗವಂತ ಕೇಸರಿ' ಬಗ್ಗೆ ಚಿತ್ರತಂಡದಿಂದ ಇದೀಗ ಹೊಸ ಮಾಹಿತಿಯೊಂದು ಘೋಷಣೆಯಾಗಿದ್ದು, ಸಂಗೀತ ನಿರ್ದೇಶಕ ಥಮನ್ ಕಂಪೋಸ್ ಮಾಡಿರುವ ಚಿತ್ರದ ಮೊದಲ ಸಾಂಗ್ ಶೀಘ್ರವೇ ಬಿಡುಗಡೆಯಾಗಲಿದೆ.
ನಿರ್ದೇಶಕ ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ತಯಾರಾಗಿರುವ 'ಭಗವಂತ ಕೇಸರಿ' ಚಿತ್ರದ ಕೆಲವು ಮುಖ್ಯ ಭಾಗಗಳ ಚಿತ್ರೀಕರಣವು ಇನ್ನೂ ನಡೆಯುತ್ತಿದ್ದು, ಸಿನಿಮಾ ಅಕ್ಟೋಬರ್ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಆಕ್ಷನ್-ಡ್ರಾಮಾ ಜಾನರ್ನ ಈ ಚಿತ್ರದಲ್ಲಿ ಬಾಲಯ್ಯ ಮತ್ತು ನಟಿ ಕಾಜಲ್ ಅಗರ್ವಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಥಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರತಂಡದ ಪರವಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿನಿಮಾದ ಬಗ್ಗೆ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಭಗವಂತ ಕೇಸರಿ ಸಿನಿಮಾದ ಮೊದಲ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದು, ಈ ಸಂಗತಿ ಬಾಲಯ್ಯ ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಚಿತ್ರದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಂಪಾಲ್, ಆರ್. ಸರತ್ಕುಮಾರ್, ಶ್ರೀರಾಮ್ರೆಡ್ಡಿ ಮತ್ತಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಯ್ಯ ಅವರ ಬಹುಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಗವಂತ ಕೇಸರಿ ಚಿತ್ರದ ಬಿಡುಗಡೆ ಕುರಿತು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).