ಜೆಎಸ್‌ಎಸ್ ಉನ್ನತ ಶಿಕ್ಷಣ, ಸಂಶೋಧನಾ ಅಕಾಡೆಮಿಗೆ ಪ್ರಥಮ ರ್ಯಾಂಕ್: ಸಿ.ಜಿ.ಬೆಟಸೂರಮಠ ಮಾಹಿತಿ

9
Published on

ಮೈಸೂರು: ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ರ‌್ಯಾಂಕಿಂಗ್-2024ರ ಸುಸ್ಥಿರ ಅಭಿವೃದ್ಧಿಯ ಗುರಿಗಳು ವಿಷಯದಲ್ಲಿ ‘ಉತ್ತಮ ಆರೋಗ್ಯ ಮತ್ತು ಕ್ಷೇಮ’ ವಿಭಾಗದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಮೊದಲ ರ‌್ಯಾಂಕ್ ಲಭಿಸಿದೆ.

ಥೈಲೆಂಡ್‌ನ ಬ್ಯಾಂಕಾಕ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಸಂಸ್ಥೆಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಶಸ್ತಿಗಾಗಿ 115 ದೇಶಗಳಿಂದ 498 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ಭಾರತದಿಂದ 115 ವಿವಿಗಳು ಪಾಲ್ಗೊಂಡಿದ್ದವು. ಕರ್ನಾಟಕದಿಂದ 12 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ಸುಸ್ಥಿರ ಅಭಿವೃದ್ಧಿ ಗುರಿಗಳು ವಿಷಯದ 9 ವಿಭಾಗಳಲ್ಲಿ ಜೆಎಸ್‌ಎಸ್ ಸಂಸ್ಥೆ ಸ್ಪರ್ಧೆ ಮಾಡಿತ್ತು. 7 ವಿಭಾಗಗಳಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.

2008ರಲ್ಲಿ ಪ್ರಾರಂಭವಾದ ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಅಕಾಡೆಮಿಯ ಬೋಧನಾ ಗುಣಮಟ್ಟ, ಬುಡಕಟ್ಟು ಜನಾಂಗದ ಆರೋಗ್ಯದ ಬಗ್ಗೆ ನಡೆಸಿರುವ ಸಂಶೋಧನೆ ಮತ್ತು ಆರೋಗ್ಯದ ಅರಿವು ಮತ್ತು ಸೇವೆಯ ಅಂಶಗಳು ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಸಹಾಯಕಾರಿಯಾಗಿವೆ. ಇದಲ್ಲದೆ ಕೈಗೆಟುಕುವ ಮತ್ತು ಶುದ್ಧ ಶಕ್ತಿ ವಿಭಾಗದಲ್ಲಿ 12ನೇ ಸ್ಥಾನ, ಬಡತನ ನಿರ್ಮೂಲನೆ ವಿಭಾಗದಲ್ಲಿ 21ನೇ ಸ್ಥಾನ, ಭೂಮಿಯ ಮೇಲಿನ ಜೀವನ ವಿಭಾಗದಲ್ಲಿ 49ನೇ ಸ್ಥಾನ, ಶುದ್ಧ ಜಲ ಮತ್ತು ನೈರ್ಮಲ್ಯ ವಿಭಾಗದಲ್ಲಿ 60ನೇ ಸ್ಥಾನ, ಜವಾಬ್ದಾರಿಯುತ ಉತ್ಪಾದನೆ ಮತ್ತು ಬಳಕೆ ವಿಭಾಗದಲ್ಲಿ 78ನೇ ಸ್ಥಾನವನ್ನು ಗಳಿಸಿದೆ ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾತನಾಡಿ, ನಮ್ಮ ಮಹಾವಿದ್ಯಾಪೀಠದ ಕಿರೀಟಕ್ಕೆ ನಮ್ಮ ಎಲ್ಲ ಸಂಸ್ಥೆಗಳು ಇಂತಹ ಪ್ರಶಸ್ತಿಗಳ ಗರಿಗಳನ್ನು ತೊಡಿಸುತ್ತ ಹೋಗಲಿ. ಎಲ್ಲ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಹಾಗೂ ಆರೋಗ್ಯಕ್ಕೆ ಬದ್ಧತೆಯಿಂದ ಕಾರ್ಯನಿರ್ವಹಣೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಜೆಎಸ್‌ಎಸ್ ವಿಶ್ವವಿದ್ಯಾಲಯದ ಸಮಾಕುಲಾಧಿಪತಿ ಡಾ.ಬಿ.ಸುರೇಶ್ ಅಮೆರಿಕದಿಂದಲೇ ಆನ್‌ಲೈನ್ ಮೂಲಕ ಮಾತನಾಡಿ ಹರ್ಷವ್ಯಕ್ತಪಡಿಸಿದರು. ಕುಲಸಚಿವ ಡಾ.ಬಿ.ಮಂಜುನಾಥ್, ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಸವನಗೌಡಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಎಸ್.ಪಿ.ಮಧು ಇದ್ದರು.

2027ಕ್ಕೆ ವರುಣ ಕ್ಯಾಂಪಸ್ ಕಾರ್ಯಾರಂಭ

ಮೈಸೂರು ತಾಲೂಕು ವರುಣ ಬಳಿ ನಿರ್ಮಾಣವಾಗುತ್ತಿರುವ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕ್ಯಾಂಪಸ್ 2027ಕ್ಕೆ ಕಾರ್ಯಾರಂಭ ಮಾಡಲಿದೆ ಎಂದು ಕುಲಪತಿ ಡಾ.ಸುರೀಂದರ್ ಸಿಂಗ್ ವಿಶ್ವಾಸವ್ಯಕ್ತಪಡಿಸಿದರು.

ಆನ್‌ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಅಲ್ಲಿನ ಕ್ಯಾಂಪಸ್ ಜಾಗತಿಕ ಗುಣಮಟ್ಟವನ್ನು ಹೊಂದಿರುತ್ತದೆ. ಸುಮಾರು 15 ಸಾವಿರ ವಿದ್ಯಾರ್ಥಿಗಳು, 2 ಸಾವಿರ ಬೋಧಕ ವರ್ಗ ಮತ್ತು 4 ಸಾವಿರ ಸಂಶೋಧನಾ ವಿದ್ಯಾರ್ಥಿಗಳಿಗೆ ಅಲ್ಲಿ ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ. ವಿಶ್ವದ ಯಾವುದೇ ರಾಷ್ಟ್ರದ ಉತ್ತಮ ಶಿಕ್ಷಣ ಸಂಸ್ಥೆಗಳು ಅಲ್ಲಿಗೆ ಬಂದು ತಮ್ಮ ಕೇಂದ್ರವನ್ನು ತೆರೆಯಬಹುದು. ಅಲ್ಲದೆ ಆರೋಗ್ಯ, ಶಿಕ್ಷಣ, ಸಂಶೋಧನೆಗೆ ಸಂಬಂಧಪಟ್ಟ ಉದ್ಯಮಗಳು ಅಲ್ಲಿ ತಮ್ಮ ಕಾರ್ಯಚಟುವಟಿಕೆ ಆರಂಭಿಸಬಹುದು. ವರುಣ ಕ್ಯಾಂಪಸ್ ಅನ್ನು ಶಿಕ್ಷಣದೊಂದಿಗೆ ಉದ್ಯಮದ ಚಟುವಟಿಕೆ ಜತೆಯಾಗಿ ಸಾಗುವಂತೆ ಸಿದ್ಧಗೊಳಿಸಲಾಗುತ್ತದೆ ಎಂದರು.

ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ರ‌್ಯಾಂಕಿಂಗ್‌ನಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಉತ್ತಮ ರ‌್ಯಾಂಕ್ ಲಭಿಸಿರುವುದು ಸಂತೋಷದ ವಿಷಯವಾಗಿದೆ. ಸಂಸ್ಥೆಯು ಮಾಡಿರುವ ಹಲವಾರು ಶ್ಲಾಘನೀಯ ಕಾರ್ಯಗಳಲ್ಲಿ ಗುಣಮಟ್ಟದ ಬೋಧನಾ ಕಾರ್ಯ, ಅತ್ಯುನ್ನತ ಸಂಶೋಧನಾ ಚಟುವಟಿಕೆ ಮತ್ತು ಸಾಮಾಜಿಕ ಆರೋಗ್ಯ ಸೇವೆ ವಿಷಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಫಲಿತಾಂಶ ದೊರೆತಿದೆ. ಮುಂಬರುವ ದಿನಗಳಲ್ಲಿ ಸಮಾಜ ಹಾಗೂ ವಿಶ್ವಕ್ಕೆ ಅಗತ್ಯವೆನಿಸುವ ಸೇವೆಗಾಗಿ ಶ್ರಮಿಸುವ ಮುಂದಿನ ಪೀಳಿಗೆಯನ್ನು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಉತ್ತೇಜಿಸಲಾಗುತ್ತದೆ. ಜ್ಞಾನವು ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುವ ಕಡೆ ಮಾನವೀಯತೆಯು ಸಮೃದ್ಧಿ ಮತ್ತು ಸಾಮರಸ್ಯದ ಮಾರ್ಗದರ್ಶನ ಮಾಡಲು ಸಹಕಾರಿಯಾಗುತ್ತದೆ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net