‘ಆಧಾರ್’ ಯೋಜನೆಯನ್ನು ಪ್ರಶ್ನಿಸಿದ್ದ ಮೊದಲ ವ್ಯಕ್ತಿ: ನಿವೃತ್ತ ನ್ಯಾ.ಕೆ.ಎಸ್. ಪುಟ್ಟಸ್ವಾಮಿ ನಿಧನ

highcourt
Published on

ಬೆಂಗಳೂರು: ಖಾಸಗಿತನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿ ‘ಆಧಾರ್’ ಯೋಜನೆಯನ್ನು ಪ್ರಶ್ನಿಸಿದ್ದ ಮೊದಲ ವ್ಯಕ್ತಿ ಎಂಬ ಪ್ರಸಿದ್ಧಿ ಪಡೆದಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ (98) ಸೋಮವಾರ ನಿಧನರಾದರು.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಅದೇ ದಿನ ಸಂಜೆ ನಾಲ್ಕು ಗಂಟೆಗೆ ವಿಲ್ಸನ್ ಗಾರ್ಡನ್‌ನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆಧಾರ್ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಮೂರ್ತಿ ಪುಟ್ಟಸ್ವಾಮಿ 2012ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ರಕ್ಷಿಸಿರುವ ಮೂಲಭೂತ ಹಕ್ಕು ಎಂದು 2017ರಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು. ಆದರೆ, ಆಧಾರ್ ಯೋಜನೆಯನ್ನು ಎತ್ತಿ ಹಿಡಿದಿತ್ತು. ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಪುಟ್ಟಸ್ವಾಮಿ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.

1952ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಅವರು 1977ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 1986ರವರೆಗೆ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿ ನಂತರ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಬೆಂಗಳೂರು ಪೀಠದ ಮೊದಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಬಳಿಕ ಆಂಧ್ರಪ್ರದೇಶದ ಆಡಳಿತ ನ್ಯಾಯಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net