

ಒಮ್ಮೆ ಸಾಮಾನ್ಯ ವ್ಯಕ್ತಿಯೊಬ್ಬನು, ವಿದ್ವಾಂಸರೊಬ್ಬರ ಕೈಗೆ ಹಾಳೆಯೊಂದನ್ನಿತ್ತು ಕೇಳುತ್ತಾನೆ ‘ಮಾನ್ಯರೇ, ಸಂತೋಷದಲ್ಲಿ ಓದಿದರೆ ದುಃಖ ಆಗಬೇಕು; ದುಃಖದಲ್ಲಿರುವಾಗ ಓದಿದರೆ ಸಂತೋಷವಾಗಬೇಕು-ಅಂತಹ ಮೂರು ವಾಕ್ಯಗಳನ್ನು ಇದರ ಮೇಲೆ ಬರೆಯಿರಿ.’ ತುಸು ಯೋಚಿಸಿ ವಿದ್ವಾಂಸರು ಬರೆಯುತ್ತಾರೆ.
1. ಜೀವನದುದ್ದಕ್ಕೂ ‘ಧನ ಧನ’ವೆಂದು ಹೋರಾಡಿ, ಹಾರಾಡಿ ನೀನೆಷ್ಟು ಧನವಂತನಾದರೂ, ನೆನಪಿರಲಿ ನೀನು ಸತ್ತ ಮೇಲೆ, ಶೋಕ ಪತ್ರಿಕೆಯಲ್ಲಿ ನಿನ್ನ ಹೆಸರಿನ ಮುಂದೆ ನಿಧನರಾದರೆಂದೇ ಬರೆಯುತ್ತಾರೆ.
2. ನಿನ್ನ ಜನನವಾದಾಗ ಮಿಠಾಯಿ ಹಂಚಿದರು; ನೀನು ಸತ್ತ ಮೇಲೆ, ನಿನ್ನ ವೈಕುಂಠ ಸಮಾರಾಧನೆಯ ದಿನ ವಡೆ-ಅಂಬೋಡೆ ಮಾಡಿ ತಿಂದರು; ಎಲ್ಲವನ್ನೂ ಎಲ್ಲರೂ ತಿಂದರು, ನಿನ್ನ ಹೆಸರಿನಲ್ಲಿ ನಿನ್ನ ಹೊರತಾಗಿ!
3. ಸಾಯುವ ಮೊದಲು ನೀನು ನಿನ್ನ ಉಯಿಲು ಬರೆಯುವಾಗ, ಯಾವ ವ್ಯಕ್ತಿಗೆ ನೀನು ಗಳಿಸಿದ ಸೊತ್ತು ಸಂಪತ್ತಿನಲ್ಲಿ ಯಾವ ಪಾಲೂ ಇಲ್ಲವೋ ಆ ವ್ಯಕ್ತಿ ‘ನೀನೇ’ ಆಗಿರುತ್ತೀಯಾ!
ಹೌದು ಇದು ಜೀವನದ ಸತ್ಯಗಳು. ಈ ಜಗತ್ತಿಗೆ ಬರುವಾಗ ನಾವು ಖಾಲಿ ಕೈಯಲ್ಲಿ ಬರುತ್ತೇವೆ. ಹೋಗುವಾಗಲೂ, ಖಾಲಿ ಕೈಯಲ್ಲಿ ಹೊರಟುಹೋಗುತ್ತೇವೆ-ಎಲ್ಲರನ್ನೂ, ಎಲ್ಲವನ್ನೂ ಬಿಟ್ಟು! ಈ ಕಟು ಸತ್ಯವನ್ನೇ ಚಿಕ್ಕ ವಯಸ್ಸಿನಲ್ಲೇ ಅರ್ಧ ಜಗತ್ತನ್ನೇ ಗೆದ್ದಿದ್ದ ಅಲೆಕ್ಸಾಂಡರ್ ತಾನು ಸಾಯುವ ಕಾಲಕ್ಕೆ ತನ್ನ ಸೇನಾಧಿಪತಿಗಳಿಗೆ ಈ ರೀತಿ ಆದೇಶಿಸುತ್ತಾನೆ: ‘ಶವಪೆಟ್ಟಿಗೆಯೊಳಗೆ ನನ್ನ ಹೆಣವನ್ನು ಇಡುವಾಗ, ನನ್ನ ಕೈಗಳು ಮಾತ್ರ ಪೆಟ್ಟಿಗೆಯ ಹೊರಗೆ ಚಾಚಿಕೊಂಡಿರುವಂತೆ ನೋಡಿಕೊಳ್ಳಿ. ಏಕೆಂದರೆ ಬರೀ ಕೈಯಲ್ಲಿ ಈ ಜಗತ್ತಿಗೆ ಬಂದ ಈ ಅಲೆಕ್ಸಾಂಡರ್, ಇಷ್ಟೆಲ್ಲಾ ಸೊತ್ತು ಸಂಪತ್ತನ್ನು ಸಂಪಾದಿಸಿ, ಸಾಮ್ರಾಜ್ಯವನ್ನು ಕಟ್ಟಿದರೂ, ಬರೀ ಕೈಯಲ್ಲಿ ಹೊರಟುಹೋಗುತ್ತಿದ್ದಾನೆ ಎಂಬ ಸಂದೇಶ ಜಗತ್ತಿಗೇ ರವಾನೆಯಾಗಲಿ’.
ಈ ಸತ್ಯವನ್ನೇ ಪುರಂದರ ದಾಸರೂ ಬರೆದರು ‘ಮಂಚ ಬಾರದು; ಮಡದಿ ಬಾರಳು, ಕಂಚು ಕನ್ನಡಿ ಹೊನ್ನು ಬಾರದು. ಸಂಚಿತಾರ್ಥದ ಹೊನ್ನು ಬಾರದು; ಸೊತ್ತು ಬಾರದು; ಅತ್ತು ಕರೆಯುವ ಬಳಗ ಬಾರದು. ಮುಂಚೆ ಮಾಡಿದ ಕರ್ಮವೇ’ ಎಂಬುದಾಗಿ. ಬಿಟ್ಟು ಹೋಗುವುದಿದ್ದರೆ, ಜನರ ಹೃದಯದಲ್ಲಿ ನಮ್ಮ ಹೆಸರನ್ನು ಬಿಟ್ಟು ಹೋಗಬೇಕು. ಸತ್ತ ಮೇಲೂ ಬಿಟ್ಟುಹೋಗುವ ವಿಚಾರಗಳೆಂದರೆ, ನಾವು ಗೈದ ಪರೋಪಕಾರ ಸತ್ಕಾರ್ಯಗಳು ಹಾಗೂ ನಮ್ಮ ಸವಿ ನೆನಪುಗಳು. ಮತ್ತೆ ದಾಸರು ಹೇಳಿದರು: ‘ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ’. ಈ ಸತ್ಯವನ್ನೇ ಸಂಸ್ಕೃತದ ಸುಭಾಷಿತವೊಂದು ಹೀಗೆ ಹೇಳುತ್ತದೆ ‘ಗೃಹೇಷು ಅತಿಥ್ ವತ್ ವಸೇತ್’ ಎಂದರೆ ನಿನ್ನ ಮನೆಯಲ್ಲೇ ನೀನು ಕೆಲ ಕಾಲ ಮಾತ್ರ ಇರಲು ಬಂದಿರುವ ಅತಿಥಿಯಂತೆ ಇರಬೇಕು. ಇದನ್ನೇ ಜಾನಪದ ಕವಿಗಳು ‘ಭೂಮಿಯ ಮೇಲೆ ಬಾಡಿಗೆದಾರ ನೀನಣ್ಣ. ಅವನು ಹೇಳಿದಾಗ ಜಾಗ ಖಾಲಿ ಮಾಡಬೇಕಣ್ಣ’ ಎಂದಿದ್ದಾರೆ. ಈ ಜೀವನ ಸತ್ಯವನ್ನೇ ನಾನೂ ಬರೆದೆ ‘ಅರ್ಥೈಸು ಬಂಧುಗಳನು ನಷ್ಟದಲಿ, ಅರ್ಥೈಸು ಮಿತ್ರನನು ಕಷ್ಟದಲಿ, ಅರ್ಥೈಸು ಮಕ್ಕಳನು ವೃದ್ಧಾಪ್ಯದಲಿ, ಅರ್ಥೈಸು ಬಾಳ ಸಂಗಾತಿಯನು ನಿನ್ನಂತ್ಯ ಕಾಲದಲಿ, ಅರ್ಥೈಸು ನಿನ್ನ ನೀ ಏಕಾಂತದಲಿ.’
ಭಗವಂತ ನಮಗೆ ಜೀವವನ್ನಷ್ಟೆ ಕೊಟ್ಟ; ಜೀವಿಸುವ ಬಗೆಯನ್ನು ನಮಗೇ ಬಿಟ್ಟುಬಿಟ್ಟ. ಜೀವನವೆಂಬ ಪಯಣ ಉಲ್ಲಾಸಮಯ, ಸಂತೋಷದಾಯಕವಾಗಬೇಕಿದ್ದರೆ, ಒಳ್ಳೆಯ ಸಹ ಪ್ರಯಾಣಿಕರನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಜೀವನದಲ್ಲಿ ಯಾರು ನಮಗಿಂತ ಮುಂದೆ ಇದ್ದಾರೆ, ಹಿಂದೆ ಇದ್ದಾರೆ ಅನ್ನುವುದಕ್ಕಿಂತಲೂ, ಯಾರು ಕೊನೆತನಕ ನಮ್ಮ ಜೊತೆ ಇರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಜೀವನವೆಂಬುದು ಒಂದು ಪುಸ್ತಕವಿದ್ದಂತೆ; ಮೊದಲ ಪುಟ ಜನನವಾದರೆ, ಕೊನೆಯ ಪುಟ ಮರಣ, ನಡುವಿನ ಹಾಳೆಗಳನ್ನು ಒಳ್ಳೆಯ ವಿಷಯಗಳನ್ನು ಬರೆದು ನಾವೇ ತುಂಬಿಕೊಳ್ಳಬೇಕು. ಜೀವನವೆಂದರೆ ಎಲ್ಲರಿಗೂ ಒಂದು ಪ್ರಶ್ನೆಪತ್ರಿಕೆ ಇದ್ದಂತೆ; ಆದರೆ ಎಲ್ಲರ ಪ್ರಶ್ನೆಗಳು ಬೇರೆ ಬೇರೆ. ಅವರವರ ಪ್ರಶ್ನೆಗಳಿಗೆ ಅವರವರೇ ಉತ್ತರಿಸಬೇಕು. ನಕಲು ಹೊಡೆದರೆ ಫೇಲಾಗುವುದು ಖಚಿತ.
ಜೀವನವೆಂದರೆ, ಒಂದು ಕಬ್ಬಿನ ದಂಟು ಇದ್ದಂತೆ; ಗಂಟು ಇದ್ದ ಕಡೆ ರಸ ಇರುವುದಿಲ್ಲ; ರಸ ಇರುವ ಕಡೆ ಗಂಟು ಇರುವುದಿಲ್ಲ. ಒಟ್ಟಿನಲ್ಲಿ ಜೀವನವೆಂದರೆ, ಸುಖ-ದುಃಖಗಳ ನೋವು ನಲಿವುಗಳ ಸೋಲು-ಗೆಲುವುಗಳ ಒಂದು ಮಿಶ್ರಣ. ಅದು ಬಹು ಕೊಠಡಿಗಳ ಮನೆ ಇದ್ದಂತೆ; ಎಲ್ಲಾ ಕೊಠಡಿಗಳನ್ನೂ ಸ್ವಚ್ಛ-ಸುಂದರವಾಗಿಟ್ಟುಕೊಳ್ಳಬೇಕು. ಒಂದು ಕೊಠಡಿ ಗಬ್ಬು ಹೊಡೆದರೂ ಮನೆ ತುಂಬಾ ದುರ್ವಾಸನೆ ತುಂಬಿಕೊಳ್ಳುತ್ತೆ. ಈ ಜಗತ್ತಿನಲ್ಲಿ ಎಲ್ಲರೂ ನಮ್ಮವರಾಗಿ ಹುಟ್ಟುವುದಿಲ್ಲ; ಆದರೆ ಎಂತಹವರನ್ನೂ ನಮ್ಮವರನ್ನಾಗಿ ಮಾಡಿಕೊಳ್ಳಬಹುದು. ಜೀವನದಲ್ಲಿ ನಮ್ಮ ದುಡಿತ ನಮಗಾಗಿ ಇರಲಿ; ಆದರೆ, ನಮ್ಮ ಹೃದಯದ ಮಿಡಿತ ಕೊಂಚ ಇತರರಿಗಾಗಿಯೂ ಇರಲಿ! ಎಲ್ಲರೂ ನಮ್ಮವರಾಗುತ್ತಾರೆ.
(ಪ್ರತಿಕ್ರಿಯಿಸಿ; drputhuraya@yahoo.co.in)