ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ

RemasterDirector_22abe5b5f
RemasterDirector_22abe5b5f
Published on

ಪಿರಿಯಾಪಟ್ಟಣ: ಮುಂಬರುವ ಲೋಕಸಭಾ ಚುನಾವಣೆಯ ಮತದಾನ ದಿನದಂದು ಕಾರ್ಯನಿರ್ವಹಿಸುವ ಪ್ರಿಸೈಡಿಂಗ್ ಅಧಿಕಾರಿಗಳಿಗೆ ಸೋಮವಾರ ಮೊದಲ ಹಂತದ ತರಬೇತಿ ನೀಡಲಾಯಿತು.


ಪಟ್ಟಣದ ಪುಷ್ಪ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ತರಬೇತಿಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಜಿ.ಡಿ.ಶೇಖರ್ ಹಾಗೂ ತಹಸೀಲ್ದಾರ್ ಸುರೇಂದ್ರಮೂರ್ತಿ ನೇತೃತ್ವದಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳಿಗೆ ತರಬೇತುದಾರರು ತರಬೇತಿ ನೀಡಿದರು.


ಒಟ್ಟು 449 ಪ್ರಿಸೈಡಿಂಗ್ ಅಧಿಕಾರಿಗಳು ಭಾಗವಹಿಸಿದ್ದರು, ಎರಡು ಅವಧಿಯಲ್ಲಿ ನಡೆದ ತರಬೇತಿಯಲ್ಲಿ ಮತದಾನ ದಿನದಂದು ಮತಗಟ್ಟೆಯಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಅನುಸರಿಸಬೇಕಾದ ನಿಬಂಧನೆಗಳು ಮತ್ತು ಇವಿಎಂ ಬಳಕೆಯ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು.


ಸಹಾಯಕ ಚುನಾವಣಾಧಿಕಾರಿ ಜಿ.ಡಿ.ಶೇಖರ್ ಮಾತನಾಡಿ, ಲೋಕಸಭಾ ಚುನಾವಣೆಯನ್ನು ತಾಲೂಕಿನಾದ್ಯಂತ ಯಶಸ್ವಿಯಾಗಿ ನಡೆಸಲು ಈಗಾಗಲೇ ಪೂರ್ವ ತಯಾರಿಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕೈಗೊಂಡಿದ್ದು, ಮತದಾನದ ದಿನದಂದು ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.


ತಹಸೀಲ್ದಾರ್ ಸುರೇಂದ್ರಮೂರ್ತಿ ಮಾತನಾಡಿ, ಮತದಾನ ಪ್ರಕ್ರಿಯೆ ಬಗ್ಗೆ ಯಾವುದೇ ಗೊಂದಲ ಉಂಟಾಗದಂತೆ ಯಶಸ್ವಿಯಾಗಿ ನಡೆಸಲು ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.


ಬಿಇಒ ಬಸವರಾಜು, ಉಪ ತಹಸೀಲ್ದಾರ್‌ಗಳಾದ ಶಶಿಧರ್, ಶುಭಾ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಲೆಕ್ಕಿಗರು, ತಾಲೂಕು ಕಚೇರಿ ಸಿಬ್ಬಂದಿ ಮತ್ತು ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net