

ರಾಮನಗರ: ಗುರುವಾರ ತಡರಾತ್ರಿ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನಾಲ್ಕು ಗುಡಿಸಲು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ನಿವಾಸಿಗಳು ಬೀದಿಪಾಲಾಗಿದ್ದಾರೆ.
ಎಂ.ಕೆ. ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ ಒಂದು ಗುಡಿಸಲಿಗೆ ಬಿದ್ದ ಬೆಂಕಿಯ ಕೆನ್ನಾಲಗೆ ಅಕ್ಕಪಕ್ಕದ ಮೂರು ಗುಡಿಸಲಿಗೂ ವ್ಯಾಪಿಸಿದ್ದು, ವಾಸವಿದ್ದ ಜನರು ಹೊರ ಬಂದು ರಕ್ಷಣೆಗಾಗಿ ಚೀರಾಡುತ್ತಿದ್ದರು. ನೋಡನೋಡುತ್ತಿದ್ದಂತೆ 4 ಗುಡಿಸಲೂ ಹೊತ್ತಿ ಉರಿಯಿತು.
ಗುಡಿಸಲುಗಳಲ್ಲಿ ವಾಸವಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ದವಸ ಧಾನ್ಯ, ಬಟ್ಟೆಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದವು. ಸೂರುಕಳೆದುಕೊಂಡ ವೆಂಕಟಲಕ್ಷ್ಮಮ್ಮ, ನಾಗರಾಜ್, ಮದ್ದೂರಮ್ಮ ಮತ್ತು ವೆಂಕಟೇಶ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.