ಜೈಸಲ್ಮೇರ್​ನಿಂದ ಜೋಧ್​ಪುರಕ್ಕೆ ಹೋಗುತ್ತಿದ್ದ ಬಸ್​ನಲ್ಲಿ ಬೆಂಕಿ: 15 ಜನರಿಗೆ ಗಾಯ | Fire

Fire
Published on

ಜೈಪುರ: ರಾಜಸ್ತಾನದ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಹೋಗುತ್ತಿದ್ದ ಬಸ್‌ಗೆ ಬೆಂಕಿ (Fire) ಹೊತ್ತಿಕೊಂಡ ಪರಿಣಾಮ ಮೂವರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 15 ಜನರು ಮಂಗಳವಾರ (ಅಕ್ಟೋಬರ್​,14) ಗಾಯಗೊಂಡಿದ್ದಾರೆ.

ಜೈಸಲ್ಮೇರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಥೈಯಾತ್ ಗ್ರಾಮದ ಬಳಿ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಜನನಿಬಿಡ ಮಾರ್ಗದಲ್ಲಿ ಅವ್ಯವಸ್ಥೆ ಮತ್ತು ಭೀತಿ ಉಂಟಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ಸು ಜೈಸಲ್ಮೇರ್ ನಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ 57 ಪ್ರಯಾಣಿಕರೊಂದಿಗೆ ಹೊರಟಿತ್ತು. ಥೈಯಾತ್ ಗ್ರಾಮವನ್ನು ದಾಟಿದ ಕೂಡಲೇ ಪ್ರಯಾಣಿಕರು ವಾಹನದ ಹಿಂಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದು. ಕೆಲವೇ ಕ್ಷಣಗಳಲ್ಲಿ, ಜ್ವಾಲೆಗಳು ವೇಗವಾಗಿ ಹರಡಿ, ಇಡೀ ಬಸ್ಸನ್ನು ಆವರಿಸಿಕೊಂಡಿದೆ. ಅಲ್ಲದೆ, ಅನೇಕ ಪ್ರಯಾಣಿಕರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಿಟಕಿಗಳು ಮತ್ತು ಬಾಗಿಲುಗಳ ಬಳಿಗೆ ಧಾವಿಸಿದ್ದಾರೆ.

ತಕ್ಷಣ ಘಟನಾ ಸ್ಥಳಕ್ಕೆ ಆಗವಿಸಿದ ಗ್ರಾಮಸ್ಥರು ಮತ್ತು ದಾರಿಹೋಕರು ತಕ್ಷಣ ತುರ್ತು ಸೇವೆಗಳು ಬರುವ ಮೊದಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಜನರು ಹತ್ತಿರದ ಮೂಲಗಳಿಂದ ನೀರು ಮತ್ತು ಮರಳನ್ನು ಬಳಸಿ ಬೆಂಕಿಯನ್ನು ನಂದಿಸಿ ಸಿಕ್ಕಿಬಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ಘಟನೆಯಲ್ಲಿ ಹದಿನೈದು ಜನರಿಗೆ ಸುಟ್ಟ ಗಾಯಗಳಾಗಿದ್ದು, ಅವರಲ್ಲಿ ಮೂವರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೆ, ಸ್ಥಳೀಯ ಗ್ರಾಮಸ್ಥರು ಮತ್ತು ಪೊಲೀಸರು ವ್ಯವಸ್ಥೆ ಮಾಡಿದ ಮೂರು ಆಂಬ್ಯುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಜೈಸಲ್ಮೇರ್‌ನ ಜವಾಹರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳು ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋಧ್‌ಪುರಕ್ಕೆ ಕಳುಹಿಸಲಾಯಿತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಲ್ಲಿ ಇಮಾಮತ್ (30) ಮತ್ತು ಮಗ ಸೇರಿದ್ದಾರೆ. ನಂತರ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಜೋಧ್‌ಪುರಕ್ಕೆ ಕರೆದೊಯ್ಯಲಾಯಿತು. ಅಲ್ಲದೆ, ಹತ್ತಿರದ ಸೇನಾ ನೆಲೆಯಿಂದ ಸೇನಾ ಸಿಬ್ಬಂದಿ ಕೂಡ ಸ್ಥಳಕ್ಕೆ ತಲುಪಿ ರಕ್ಷಣಾ ಮತ್ತು ಅಗ್ನಿಶಾಮಕ ನಿಯಂತ್ರಣ ಪ್ರಯತ್ನಗಳಲ್ಲಿ ಸಹಾಯ ಮಾಡಿದರು.

ಬೆಂಕಿಯ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಪ್ರಾಥಮಿಕ ವರದಿಗಳು ಶಾರ್ಟ್ ಸರ್ಕ್ಯೂಟ್ ಅಥವಾ ಎಂಜಿನ್ ಅಧಿಕ ಬಿಸಿಯಾಗಿರಬಹುದೆಂದು ಸೂಚಿಸುತ್ತವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net