ಭೀಕರ ಅಪಘಾತ: ಎರಡು ಲಾರಿ ಡಿಕ್ಕಿ ಹೊಡೆದು ಬೆಂಕಿ.. ಚಾಲಕ ಸಜೀವ ದಹನ!

accident
Published on

ಜೈಪುರ: ರಾಜಸ್ಥಾನದ ಬಿಕಾನೇರ್‌ನ ಮಹಾಜನ್‌ನ ಭಾರತಮಾಲಾ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಟ್ರಕ್‌ಗಳು ಬೆಂಕಿಗೆ ಆಹುತಿಯಾಗಿವೆ. ಈ ಅಪಘಾತದಲ್ಲಿ ಟ್ರಕ್ ಚಾಲಕ ಸಜೀವ ದಹನವಾಗಿದ್ದಾನೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯಿಂದಾಗಿ ಹೆದ್ದಾರಿಯಲ್ಲಿ ಭಾರಿ ಸಂಖ್ಯೆಯಲ್ಲಿ ವಾಹನಗಳು ಸಿಲುಕಿಕೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ಬಿಕಾನೇರ್‌ನ ಮಹಾಜನ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತ್​ಮಾಲಾ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಎರಡು ಟ್ರಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಎರಡು ಲಾರಿಗಳಿಗೆ ಬೆಂಕಿ ತಗುಲಿದೆ. ಗಾಯಾಳುಗಳನ್ನು ಬಿಕಾನೇರ್‌ನ ಪಿಬಿಎಂ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬಿಕಾನೇರ್ ಜಿಲ್ಲೆಯ ಮೂಲಕ ಹಾದುಹೋಗುವ ಜಾಮ್‌ನಗರ-ಅಮೃತಸರ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕೆಟ್ಟುಹೋದ ಜೈತ್‌ಪುರ ಟ್ರಕ್ ಅನ್ನು ಸರಿಪಡಿಸುವಲ್ಲಿ ಟ್ರಕ್ ಚಾಲಕ ಮತ್ತು ಸಹಾಯಕ ನಿರತರಾಗಿದ್ದರು. ಅಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಆಗ ಎರಡೂ ಟ್ರಕ್‌ಗಳು ಬೆಂಕಿಗೆ ಆಹುತಿಯಾಗಿವೆ.

ಈ ಘಟನೆಯಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದ ಲಾರಿಯ ಚಾಲಕ ಲಾರಿಯೊಳಗೆ ಸುಟ್ಟು ಕರಕಲಾಗಿದ್ದು, ಹೊರಗೆ ನಿಲ್ಲಿಸಿದ್ದ ಟ್ರಕ್ ರಿಪೇರಿ ಮಾಡುತ್ತಿದ್ದ ಚಾಲಕ, ನಿರ್ವಾಹಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net