ರಾಜಾನುಕುಂಟೆ ರೈಲ್ವೆ ಯಾರ್ಡ್‌ನಲ್ಲಿ ಬೆಂಕಿ ಎರಡು ಬೋಗಿಗಳಿಗೆ ಹಾನಿ

Railwy
Railwy
Published on: 

ಬೆಂಗಳೂರು: ನಗರದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಯಾರ್ಡ್‌ನಲ್ಲಿ ನಿಲ್ಲಿಸಲಾಗಿದ್ದ ಎರಡು ರೈಲ್ವೆ ಬೋಗಿಗಳು ಬುಧವಾರ ಬೆಳಗ್ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿವೆ.

ಅದೃಷ್ಟವಶಾತ ಬೋಗಿಗಳಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜಾನುಕುಂಟೆ ರೈಲ್ವೆ ನಿಲ್ದಾಣದಿಂದ 500 ಮೀಟರ್ ದೂರದಲ್ಲಿರುವ ಯಾರ್ಡ್‌ನಲ್ಲಿ ಬಳಕೆಗೆ ಯೋಗ್ಯವಲ್ಲದ ಎರಡು ಬೋಗಿಗಳನ್ನು ಹಲವು ದಿನಗಳಿಂದ ನಿಲ್ಲಿಸಲಾಗಿತ್ತು. ರೈಲ್ವೆ ಇಲಾಖೆಯು ಅಣಕು ಅಗ್ನಿ ಅವಘಡ ಪ್ರದರ್ಶನ ಕಾರ್ಯಾಚರಣೆಗಳಿಗಾಗಿ ಈ ಬೋಗಿಗಳನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

ಬೋಗಿಗಳು ರೈಲು ಹಳಿಗಳ ಮೇಲಿರದೆ ಯಾರ್ಡ್‌ನಲ್ಲಿ ನಿಲುಗಡೆ ಮಾಡಲಾಗಿತ್ತು. ಬೆಳಗ್ಗೆ 10.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಎರಡೂ ಬೋಗಿಗಳಿಗೆ ವ್ಯಾಪಿಸಿಕೊಂಡಿತ್ತು. ಮಾಹಿತಿ ತಿಳಿದ ದೊಡ್ಡಬಳ್ಳಾಪುರ ಮತ್ತು ಯಲಹಂಕದಿಂದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಒಂದು ಗಂಟೆ ಕಾರ್ಯಾಚರಣೆಯ ಬಳಿಕ ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ.

ಘಟನಾ ಸ್ಥಳಕ್ಕೆ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕಾರಿಗಳು ಹಾಗೂ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬೋಗಿಗಳಲ್ಲಿ ತಾಂತ್ರಿಕ ದೋಷ ಉಂಟಾಗಿತ್ತೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆಯೇ ಎಂಬ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿ ಇಲ್ಲದಿರುವುದು ತನಿಖೆಗೆ ಸವಾಲು:

ಘಟನಾ ಸ್ಥಳದ ಸುತ್ತಮುತ್ತ ಗಿಡ ಮರ, ಹುಲ್ಲು ಬೆಳೆದುಕೊಂಡಿತ್ತು.ಆ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮರಾಗಳು ಇರಲಿಲ್ಲ. ಹೀಗಾಗಿ ಬೆಂಕಿ ಆಕಸ್ಮಿಕವಾಗಿ ಹೊತ್ತಿಕೊಂಡಿದೆಯೇ ಅಥವಾ ಕಿಡಿಗೇಡಿಗಳ ಕೃತ್ಯ ಎಂಬುದರ ಬಗ್ಗೆ ಇಲಾಖೆಯ ವಿಶೇಷ ತಂಡದಿಂದ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net