ವಿದ್ಯುತ್ ಶಾಕ್ ಸರ್ಕ್ಯೂಟ್ ಸಂಭವಿಸಿ ಹಾನಿ

IMG-20240111-WA0024
Published on

ಎಚ್.ಡಿ.ಕೋಟೆ: ಪಟ್ಟಣದ ಹ್ಯಾಂಡ್‌ಪೋಸ್ಟ್ ಬಳಿ ಗುರುವಾರ ವಿದ್ಯುತ್ ಶಾಕ್ ಸರ್ಕ್ಯೂಟ್‌ನಿಂದ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಹಣ, ಚಿನ್ನಾಭರಣ ಹಾಗೂ ಗೃಹೋಪಯೋಗಿ ವಸ್ತುಗಳು ಆಹುತಿಯಾಗಿವೆ.

ಗ್ರಾಮದ ಕೆಂಪಮ್ಮ ಅವರ ಮನೆಯಲ್ಲಿ ದುರ್ಘಟನೆ ಸಂಭವಿಸಿದೆ. ಕೆಂಪಮ್ಮ ಅವರು ಮನೆಗೆ ಬೀಗ ಹಾಕಿಕೊಂಡು ತಮ್ಮ ಮೂವರು ಮೊಮ್ಮಕ್ಕಳ ಜತೆಗೆ ಜಮೀನಿನಲ್ಲಿ ಹೂ ಬಿಡಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾಂಭಿಸಿದ್ದು, ಪಕ್ಕದಲ್ಲಿದ್ದ ಚಿಲ್ಲರೆ ಅಂಗಡಿ ಮಾಲೀಕ ಕೂಡಲೇ ಕೂಗಿಕೊಂಡಿದ್ದಾರೆ. ವಿಷಯ ತಿಳಿದು ಮನೆಯ ಬಳಿ ಓಡಿ ಬಂದ ಕೆಂಪಮ್ಮ ಮೊಮ್ಮಗನ ಮೂಲಕ ಅಗ್ನಿಶಾಮಕ ದಳ ಠಾಣೆಗೆ ವಿಚಾರ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಆದರೆ ಅಷ್ಟರಲ್ಲಾಗಲೇ ಮನೆಯ ಒಳಗೆ ಬೆಂಕಿ ಆವರಿಸಿ ದವಸಧಾನ್ಯ, ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದವು. ಕೆಂಪಮ್ಮ ಅವರು ತಮ್ಮ ಟ್ರಂಕ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಬೆಂಕಿಯಲ್ಲಿ ಕರಗಿಹೋಗಿವೆ. ಕೂಡಿಟ್ಟಿದ್ದ ಹಣ ಸಹ ಆಹುತಿಯಾಗಿದೆ. ಅಗ್ನಿಶಾಮಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಾಯಕ ಅಗ್ನಿ ಶಾಮಕದಳ ಅಧಿಕಾರಿ ಎಂ.ಜಿ. ಸೋಮಣ್ಣ, ಚಾಲಕ ಹೇಮಂತ್ ಕುಮಾರ್, ಸಿಬ್ಬಂದಿ ಮುನಿಸಿದ್ದ ನಾಯಕ, ರಾಹುಲ್, ಬಾಲಕೃಷ್ಣ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net