

ಕಲಬುರಗಿ: ಇಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದಿ ವಿರೋಧಿ ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದ ಎಐಎಂಐಎಂ ಮುಖ್ಯಸ್ಥ ವಾರಿಸ್ ಪಠಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಿರಿಯ ವಕೀಲರೋರ್ವರು ನೀಡಿದ್ದ ದೂರಿನ ಅನ್ವಯ ಕಲಬುರಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಫೆ.19ರಂದು ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಐಎಂಐಎಂ ಮುಖ್ಯಸ್ಥ ವಾರಿಸ್, ದೇಶದಲ್ಲಿ ಮುಸ್ಲಿಮರು 15 ಕೋಟಿ ಇರಬಹುದು. ಆದರೆ ಈ 15 ಕೋಟಿ ಮಂದಿ 100 ಕೋಟಿ ಹಿಂದುಗಳಿಗೆ ಸರಿಸಮಾನ ಎಂದು ಹೇಳಿದ್ದರು.
ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕು. ನಮ್ಮ ಸ್ವಾತಂತ್ರ್ಯವನ್ನು ನಾವು ಪಡೆಯಬೇಕು. ಇದನ್ನೆಲ್ಲ ಕೇಳಿ ತೆಗೆದುಕೊಳ್ಳುವುದಲ್ಲ. ಬಲವಂತವಾಗಿ ಕಿತ್ತುಕೊಳ್ಳಬೇಕು. ನಾವು 15 ಕೋಟಿ ಮಂದಿ ಇರಬಹುದು. ಆದರೆ 100 ಕೋಟಿ ಇರುವ ಹಿಂದುಗಳಿಗಿಂತ ನಮ್ಮ ತೂಕ ಹೆಚ್ಚು. ಇದನ್ನು ನೆನಪಿಟ್ಟುಕೊಳ್ಳಿ ಎಂದು ಪಠಾಣ್ ಜನರನ್ನು ಪ್ರಚೋದಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಈ ಭಾಷಣಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ವಕೀಲರೊಬ್ಬರು ಕಲಬುರಗಿ ಪೊಲೀಸರಿಗೆ ದೂರು ನೀಡಿದ್ದರು.
ವಿವಾದ ಉಂಟಾಗುತ್ತಿದ್ದಂತೆ ವಾರಿಸ್ ಪಠಾಣ್ ಅವರು ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಹೇಳಿದ್ದರು. ವಾರಿಸ್ ಬಳಿ ಈ ಬಗ್ಗೆ ವಿವರಣೆ ಕೇಳಲಾಗುವುದು ಎಂದು ಎಐಎಂಐಎಂ ಪಕ್ಷ ಹೇಳಿದೆ.
ಇದೀಗ ವಾರಿಸ್ ಮಾತುಗಳು ಗಲಭೆ ಸೃಷ್ಟಿಸುವ ರೀತಿಯದ್ದಾಗಿದ್ದು ಸಮುದಾಯಗಳ ಮಧ್ಯ ಶತೃತ್ವ ಹುಟ್ಟಿಸುವಂತಹವುಗಳು ಎಂಬ ಆರೋಪದಡಿ ಎಫ್ಐಆರ್ ದಾಖಲಾಗಿದೆ. (ಏಜೆನ್ಸೀಸ್)