ಹಾರ್ನ್ ಮಾಡುವ ಮುನ್ನ ಯೋಚಿಸಿ; ಅನಗತ್ಯ ಹಾರ್ನ್​​ ಮಾಡಿದ್ರೆ ಇನ್ಮುಂದೆ 10 ಸಾವಿರ ದಂಡ!

No Horn
Published on

ನೊಯ್ಡಾ: ಅನಾವಶ್ಯಕವಾಗಿ ಹಾರ್ನ್​ ಮಾಡಿ ಕಿರಿಕಿರಿ ಮಾಡುವ ವಾಹನ ಸವಾರರ ವಿರುದ್ಧ ನೊಯ್ಡಾದಲ್ಲಿ ಕಠಿಣ ಕ್ರಮ ಜಾರಿಗೆ ತರಲು ನಿರ್ಧರಿಸಿದೆ. ನೋಯ್ಡಾದಲ್ಲಿ ನಿತ್ಯವೂ ಸಂಚಾರ ದಟ್ಟಣೆ ಅಧಿಕವಾಗಿದ್ದು, ಶಬ್ದ ಮಾಲಿನ್ಯವೂ ಹೆಚ್ಚಿದೆ. ಹೀಗಾಗಿ ಕೆಲವು ಪ್ರದೇಶಗಳನ್ನು ನಿಶ್ಯಬ್ಧ ವಲಯವನ್ನಾಗಿಸಲು ನೊಯ್ಡಾ ಪ್ರಾಧಿಕಾರವು ಅನಗತ್ಯ ಹಾರ್ನ್ ಮಾಡುವವರಿಗೆ 10,000 ರೂ. ದಂಡ ವಿಧಿಸಲು ನಿರ್ಧರಿಸಿದೆ.

ನೋಯ್ಡಾ ಪ್ರಾಧಿಕಾರದ ಸಂಚಾರ ವಿಭಾಗ ನಗರದ 140 ಪ್ರದೇಶಗಳನ್ನು ಈಗಾಗಲೇ ಗುರುತಿಸಿದ್ದು, ಈ ಪ್ರದೇಶಗಳು ಇನ್ನು ಮುಂದೆ ನಿಶ್ಯಬ್ಧ ವಲಯವಾಗಿ ಬದಲಾಗಲಿದೆ. ಚಾಲಕರು ವಾಹನ ಚಲಾಯಿಸುವಾಗ ಅನಗತ್ಯವಾಗಿ ಹಾರ್ನ್ ಮಾಡದಂತೆ ಈ ಪ್ರದೇಶಗಳಲ್ಲಿ "No Horn" ಸೂಚನಾ ಫಲಕಗಳನ್ನು ಅಳವಡಿಸಲು ಪ್ರಾಧಿಕಾರ ಮುಂದಾಗಿದೆ.

ಈ ಮೊದಲು ನೊಯ್ಡಾದಲ್ಲಿ ಅನಗತ್ಯ ಹಾರ್ನ್ ಮಾಡಿದಲ್ಲಿ 1000 ರೂ. ದಂಡ ವಿಧಸಲಾಗುತ್ತಿತ್ತು. ಎರಡನೇ ಬಾರಿಗೆ ಅನಗತ್ಯ ಹಾರ್ನ್ ಮಾಡಿದಲ್ಲಿ 2000 ರೂ. ದಂಡದ ಮೊತ್ತ ಪಾವತಿಸಬೇಕಾಗಿತ್ತು. ಇದೀಗ ಶಬ್ದ ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಮಾರ್ಪಾಡು ಮಾಡಲಾಗಿದ್ದು, ನಿಶ್ಯಬ್ಧ ವಲಯದಲ್ಲಿ ಹಾರ್ನ್ ಮಾಡಿದಲ್ಲಿ 10,000 ದಂಡ ವಿಧಿಸಲು ತೀರ್ಮಾನಿಸಲಾಗಿದೆ.

ಪ್ರಸ್ತುತ ನಗರವನ್ನು ವಸತಿ, ಕೈಗಾರಿಕಾ ಮತ್ತು ವಾಣಿಜ್ಯ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು ನಾಲ್ಕನೇ ವಲಯ ಮೌನ ವಲಯ ಆಗಿರುತ್ತದೆ ಎಂದು ನೊಯ್ಡಾ ಪ್ರಾಧಿಕಾರದ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆಸ್ಪತ್ರೆಗಳು, ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯದ ಆವರಣಗಳು ಮತ್ತು ಹೆಚ್ಚಿನ ಸಂಖ್ಯೆಯ ವೃದ್ಧರು ವಾಸಿಸುವ ಪ್ರದೇಶಗಳು ನಿಶ್ಯಬ್ಧ ವಲಯದ ಅಡಿಯಲ್ಲಿ ಬರುತ್ತವೆ. ಈ ವಲಯದ 100 ಮೀಟರ್ ವ್ಯಾಪ್ತಿಯಲ್ಲಿ ಹಾರ್ನ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net