ಇದೆಲ್ಲಾ ಆಕೆ ಮಾಡ್ತಿರೋ…! ಪ್ರೇಯಸಿ ಆರೋಪಕ್ಕೆ ಕಡೆಗೂ ಮೌನ ಮುರಿದ ನಟ ರಾಜ್ ತರುಣ್

ವಿಜಯವಾಣಿ - 2024-07-06T100346.868
Published on

ಆಂಧ್ರಪ್ರದೇಶ: ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು ಮಾಡುವ ಮಹತ್ವದ ಕನಸ ಹೊತ್ತು, ಅದೆಷ್ಟೋ ಒದ್ದಾಟಗಳನ್ನು ಅನುಭವಿಸಿ, ಇನ್ನೇನು ಹೊಸ ದಾರಿಯನ್ನು ಕಂಡೆವು ಎನ್ನುವಷ್ಟರೊಳಗೆ ಯಾವುದಾದರೂ ಒಂದು ಎಡವಟ್ಟು ಅಥವಾ ವಿವಾದಕ್ಕೆ ಸಿಲುಕಿಕೊಳ್ಳುವ ನಟ-ನಟಿಯರೇ ಹೆಚ್ಚು. ಅದರಲ್ಲಿಯೂ ಇವರು ಮುಂದಿನ ದಿನಗಳಲ್ಲಿ ಒಳ್ಳೆಯ ಕಲಾವಿದರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ನಿರ್ಧರಿಸುವ ಸಿನಿಪ್ರಿಯರಿಗೆ ಇಂತಹ ಘಟನೆಗಳು ಭಾರೀ ಆಘಾತ ಸೃಷ್ಟಿಸುತ್ತದೆ. ಸದ್ಯ ಈ ಸಾಲಿಗೆ ಟಾಲಿವುಡ್ ನಟ ರಾಜ್ ತರುಣ್ ಸೇರ್ಪಡೆಯಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ರಾಜ್ ತರುಣ್ ವಿರುದ್ಧ ಪ್ರೇಯಸಿ ಲಾವಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಜ್​ ಅನ್ಯ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಇದರಿಂದ ನನಗೆ ಮೋಸವಾಗಿದೆ ಎಂದು ಆರೋಪ ಎಸಗಿದ್ದಾರೆ. ಸದ್ಯ ಈ ವಿಚಾರ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ತನ್ನ ಮೇಲಿನ ಆರೋಪಗಳಿಗೆ ಸ್ವತಃ ಸ್ಪಷ್ಟನೆ ನೀಡಿದ ತರುಣ್​, ಲಾವಣ್ಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದು, ಮಾಧ್ಯಮಗಳ ಬೆಂಬಲವನ್ನು ಕೋರಿದರು.

ಕಳೆದ 11 ವರ್ಷಗಳಿಂದ ನಟನ ಜತೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದ ಲಾವಣ್ಯ, ಕೆಲವು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ರಹಸ್ಯವಾಗಿ ಮದುವೆಯಾಗಿದ್ದೆವು ಎಂದು ಹೇಳಿಕೊಂಡಿದ್ದಾರೆ. ರಾಜ್ ತರುಣ್ ಈಗ ಮುಂಬೈ ಮೂಲದ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿರುವ ಲಾವಣ್ಯ, ನನಗೆ ಮೋಸ ಮಾಡಿದ್ದಕ್ಕಾಗಿ ರಾಜ್​ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಈ ವಿವಾದ ಟಾಲಿವುಡ್​ ಅಂಗಳದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದು, ಚಿತ್ರರಂಗವನ್ನು ಗೊಂದಲಕ್ಕೆ ದೂಡಿದೆ. ನರಸಿಂಗಿ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಲಾವಣ್ಯ ದೂರು ದಾಖಲಿಸಿದ್ದಾರೆ. ನನ್ನ ಮೇಲೆ ಇಂತಹ ಆರೋಪಗಳನ್ನು ಹೊರಿಸಿರುವ ಲಾವಣ್ಯ, ಮಾದಕ ವ್ಯಸನಿಯಾಗಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಆಕೆ ಈ ರೀತಿ ಹೊಸ ನಾಟಕಗಳನ್ನು ಹುಟ್ಟುಹಾಕಿದ್ದಾರೆ. ನನ್ನನ್ನು ಬ್ಲ್ಯಾಕ್​ಮೇಲ್ ಮಾಡ್ತಿದ್ದಾರೆ ಅಷ್ಟೇ. ಲಾವಣ್ಯ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ. ಶೀಘ್ರವೇ ಪತ್ರಿಕಾಗೋಷ್ಠಿ ನಡೆಸಿ, ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ ಎಂದು ರಾಜ್ ತರುಣ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net