ಲೆಫ್ಟಿನೆಂಟ್​ ಕರ್ನಲ್​ ಅಮರನಾಥ್​ಗೆ ಅಂತಿಮ ವಿದಾಯ

karnal
ಕೋಲಾರದ ಗಲ್​ಪೇಟೆ ನಿವಾಸದಲ್ಲಿ ಅಮರನಾಥ್​ ಮೃತದೇಹವನ್ನು ಮೆರವಣಿಗೆ ಮಾಡಲಾಯಿತು.
Published on

ಕೋಲಾರ: ಹೃದಯಾಘಾತದಿಂದ ಕೊನೆಯುಸಿರೆಳೆದು ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದ ಲೆಫ್ಟಿನೆಂಟ್​ ಕರ್ನಲ್​ ಅಮರನಾಥ್​ ದೇಹಾಂಶಕ್ಕೆ ಜಿಲ್ಲಾಡಳಿತ, ಕುಟುಂಬಸ್ಥರು, ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಅಂತಿಮ ಗೌರವ ಸಮರ್ಪಿಸಿದರು.

ಮೇಘಾಲಯದ ಶಿಲ್ಲಾಂಗ್​ನ ಮಿಲಿಟರಿ ಕ್ಯಾಂಪ್​ನಲ್ಲಿ ಅಮರನಾಥ್​ ದೇಹಕ್ಕೆ ಮಿಲಿಟರಿ ಗೌರವಗಳನ್ನು ಸಲ್ಲಿಸಿದ ನಂತರ ಅಲ್ಲಿಗೆ ತೆರಳಿದ್ದ ಅವರ ಕುಟುಂಬ ಸದಸ್ಯರಿಗೆ ಅಮರನಾಥ್​ ದೇಹದ ಕೆಲವು ಭಾಗಗಳನ್ನು ಸಂಗ್ರಹಿಸಿ ವೈದ್ಯರು ನೀಡಿದ್ದರು.
ದೇಹಾಂಶಗಳನ್ನು ಕೋಲಾರಕ್ಕೆ ತಂದಿದ್ದ ಕುಟುಂಬಸ್ಥರು ಗಲ್​ಪೇಟೆ ಮನೆಯ ಬಳಿ ಇಟ್ಟು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಅಕ್ರಂಪಾಷಾ, ತಹಸೀಲ್ದಾರ್​ ಹರ್ಷವರ್ಧನ್​ ಹಾಗೂ ಪೌರಾಯುಕ್ತ ಶಿವಾನಂದ ಇತರರು ಗೌರವ ಸಲ್ಲಿಸಿದರು.
ನಂತರ ಅಮರನಾಥ್​ರ ಸಮವಸ್ತ್ರ, ದೇಹದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜ, ಭಾವಚಿತ್ರವನ್ನು ಅಲಂಕೃತ ರಥದಲ್ಲಿಟ್ಟು ನಗರದಲ್ಲಿ ಮೆರವಣಿಗೆ ಮಾಡಲಾಯಿತು.
ಮನೆಯಿಂದ ಬೈಕ್​ ರ್ಯಾಲಿ, ನಿವೃತ್ತ ಯೋಧರು, ವಿವಿಧ ಸಂಘ&ಸಂಸ್ಥೆಗಳ ಯುವಕರು, ಎನ್​ಸಿಸಿ ಬೆಟಾಲಿಯನ್​, ಯುವ ಯೋಧರ ಪಡೆ ಮತ್ತಿತರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಅಮರನಾಥ್​ ಅಮರ್​ ರಹೇ ಘೋಷಣೆ ಮೊಳಗಿಸಿದರು. ಮೆಕ್ಕೆ ವೃತ್ತ, ಬಸ್​ ನಿಲ್ದಾಣ, ಕ್ಲಾಕ್​ ಟವರ್​ ವೃತ್ತದ ಮೂಲಕ ಅಂಬೇಡ್ಕರ್​ ಉದ್ಯಾನದಲ್ಲಿರುವ ಹುತಾತ್ಮ ಸ್ಮಾರಕದ ಬಳಿ ಕೆಲ ಕಾಲ ಇಡಲಾಗಿತ್ತು. ಆನಂತರ ಡೂಂಲೈಟ್​ ವಿವೇಕಾನಂದ ವೃತ್ತದ ಮೂಲಕ ಗಾಂವನ, ಎಂ.ಜಿ.ರಸ್ತೆ, ಅಮ್ಮವಾರಿಪೇಟೆ ಮೂಲಕ ಅಮರನಾಥ್​ರ ಸ್ವಗ್ರಾಮ ಸುಗಟೂರಿಗೆ ಕರೆ ತರಲಾಯಿತು. ಸುಗಟೂರು ಗ್ರಾಮಸ್ಥರು ಹಾಗೂ ಅಮರನಾಥ್​ ಕುಟುಂಬ ಸದಸ್ಯರೆಲ್ಲರು ಗೌರವ ಸಲ್ಲಿಸಿದರು. ನಂತರ ತೋಟದಲ್ಲಿ ಗುರುತಿಸಿದ್ದ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದೇ ವೇಳೆ ಪೊಲೀಸ್​ ತುಕಡಿಯಿಂದ ಆಗಸಕ್ಕೆ ಗುಂಡು ಸಿಡಿಸಿ ಗೌರವ ಸಮರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net