ಚಿತ್ರೀಕರಣ ತಾಣವಾಗಲಿ ಕೊಡಗು ಜಿಲ್ಲೆ

film tourism
Published on

ಮಡಿಕೇರಿ:

ಸಿನಿಮಾಗಳಲ್ಲಿ ತೋರಿಸಲಾಗುವ ಪ್ರವಾಸಿತಾಣಗಳು ಏಕಾಏಕಿ ಪ್ರಸಿದ್ಧಿ ಪಡೆದುಕೊಳ್ಳುತ್ತವೆ. ಇಂಥ ಅವಕಾಶಗಳನ್ನು ಬಳಸಿಕೊಂಡು ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇದಕ್ಕಾಗಿಯೇ 2024-29ರ ಪ್ರವಾಸೋದ್ಯಮ ನೀತಿಯಲ್ಲಿ ಚಲನಚಿತ್ರ ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡಲಾಗಿದೆ. ಕೊಡಗಿನಲ್ಲೂ ಚಲನಚಿತ್ರ ಪ್ರವಾಸೋದ್ಯಮಕ್ಕೆ ವಿಶಾಲ ಅವಕಾಶಗಳಿದ್ದು, ಚಿತ್ರೋದ್ಯಮಿಗಳನ್ನು ಇತ್ತ ಸೆಳೆಯಲು ಪೂರಕ ವಾತಾವರಣ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸುತ್ತಿದೆ.

ಮಲೆನಾಡಿನ ಸೆರಗಿನಲ್ಲಿ ಇರುವ ಕೊಡಗು ಪಶ್ಚಿಮಘಟ್ಟದ ಸುಂದರ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದ್ದು, ಅದ್ಭುತ ಪ್ರಾಕೃತಿಕ ಸೌಂದರ್ಯದಿAದ ಕೂಡಿದೆ. ಹಾಗಾಗಿ ಕೊಡಗು ಜಿಲ್ಲೆಯನ್ನು ಭಾರತದ ಸ್ಕಾಟ್‌ಲೆಂಡ್' ಎಂದೂ ಕರೆಯುತ್ತಾರೆ. ಪ್ರತಿ ವರ್ಷವೂ ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಲ್ಲಿನ ಪ್ರಾಕೃತಿಕ ಸೊಬಗಿಗೆ ಮಾರು ಹೋಗದವರೇ ಇಲ್ಲ. ಕೊಡಗು ಇತ್ತೀಚೆಗೆ ದೇಶದ ಪ್ರಮುಖ ಪ್ರವಾಸಿತಾಣವಾಗಿ ಬದಲಾಗಿದ್ದು, ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಾಡುವ ಅತ್ಯುತ್ತಮ ಪ್ರವಾಸಿತಾಣಗಳಲ್ಲಿ ಮೊದಲ 10 ಸ್ಥಾನಗಳ ಒಳಗೆ ಕಾಣಿಸಿಕೊಳ್ಳುತ್ತಿದೆ.

ಸಿನಿಮಾದವರಿಗೂ ಕೊಡಗು ಬಹಳ ಇಷ್ಟದ ಪ್ರದೇಶ. ಇಲ್ಲಿನ ಆಕರ್ಷಕವಾದ ಭೂ ದೃಶ್ಯಗಳು, ಬೆಟ್ಟ, ಗುಡ್ಡ, ಹಸಿರು, ಜಲಪಾತ, ವನ್ಯ ಜೀವಿಗಳು, ಸ್ನೇಹಪರ ವ್ಯಕ್ತಿತ್ವದ ಸ್ಥಳೀಯ ಜನರು ಸಿನಿಮಾದವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಅತ್ಯುತ್ತಮ ಲೊಕೇಷನ್ ಆಗಿ ಗುರುತಿಸಿಕೊಂಡಿದೆ. ಇಲ್ಲಿಯ ರಮಣೀಯ ದೃಶ್ಯಗಳನ್ನು ತಮ್ಮ ಸಿನಿಮಾದಲ್ಲಿ ಕಟ್ಟಿಕೊಡುವ ಸಲುವಾಗಿಯೇ ಸಾಕಷ್ಟು ಸಿನಿಮಾ ತಯಾರಕರು ಕೊಡಗಿನಲ್ಲಿ ಅನೇಕ ಸಿನಿಮಾಗಳ ಚಿತ್ರೀಕರಣ ನಡೆಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರಿಂದ ಯೋಗ ರಾಜ ಭಟ್ಟರ ತನಕ ಹಲವು ನಿರ್ದೇಶಕರು ಕೊಡಗಿನಲ್ಲಿ ಚಿತ್ರೀಕರಿಸಿದ ಸಿನಿಮಾಗಳು ಹಿಟ್ ಆಗಿವೆ. ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯ ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ.

ಸಿನಿಮಾ ಪ್ರಭಾವಿ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಾಯಕ, ನಾಯಕಿಯರಾದಿಯಾಗಿ ನಟರು ಮಾತ್ರ ಜನಪ್ರಿಯರಾಗುವುದಿಲ್ಲ. ಆ ಸಿನಿಮಾ ಚಿತ್ರೀಕರಣಕ್ಕೆ ಬಳಸಿಕೊಂಡ ಸ್ಥಳಗಳೂ ಪ್ರಸಿದ್ಧಿಗೆ ಬಂದು ಬಿಡುತ್ತದೆ. ಸಿನಿಮಾ ಚಿತ್ರೀಕರಣ ನಡೆದಿದೆ ಎನ್ನುವ ಕಾರಣಕ್ಕಾಗಿಯೇ ಪ್ರವಾಸಿ ತಾಣವಾಗಿ ಬದಲಾಗಿಬಿಡುತ್ತದೆ. ಕೊಡಗಿನಲ್ಲಿ ಈಗ ಪ್ರವಾಸಿಗರ ಮೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಾಂದಲ್ ಪಟ್ಟಿ ಯೋಗರಾಜ ಭಟ್ಟರ ಗಾಳಿಪಟ ಸಿನಿಮಾ ಬಿಡುಗಡೆ ತನಕ ಹೊರಜಗತ್ತಿಗೆ ಗೊತ್ತೇ ಇರಲಿಲ್ಲ. ಆದರೆ ನಂತರದ ದಿನಗಳಲ್ಲಿ 'ಮುಗಿಲ್‌ಪೇಟೆ' ಯಾಗಿ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿದೆ.

ಮಾಂದಲ್ ಪಟ್ಟಿ 'ಮಗಿಲ್‌ಪೇಟೆ' ಆಗಿ ಬದಲಾದ ನಂತರ ಜನಪ್ರಿಯ ಪ್ರವಾಸಿ ತಾಣ ಆಗಿರುವುದು ಸಿನಿಮಾ ಪ್ರವಾಸೋದ್ಯಮದ ಅವಕಾಶದ ಬಳಕೆಯ ಸಾಧ್ಯತೆಗೆ ಒಂದು ಉದಾಹರಣೆ ಮಾತ್ರ. ಇಂಥ ಸಾಕಷ್ಟು ಅವಕಾಶಗಳ ಮೂಲಕ ಕೊಡಗು ಸೇರಿದಂತೆ ಕರ್ನಾಟಕದಲ್ಲಿ ಸಿನಿಮಾ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಹಾಗಾಗಿ ಸರ್ಕಾರ ಇದಕ್ಕಾಗಿ ಪ್ರತ್ಯೇಕ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದಲ್ಲದೆ ರಾಜ್ಯ ವ್ಯಾಪಿ ಸಿನಿಮಾ ಚಿತ್ರೀಕರಿಸಲು 'ಚಿತ್ರೀಕರಣ ಸ್ನೇಹಿ' ತಾಣಗಳನ್ನು ಗುರುತಿಸಿ, ಉತ್ತೇಜನ ನೀಡಲು ಕಾರ್ಯತಂತ್ರ ರೂಪಿಸುತ್ತಿದೆ.

ಜನಪ್ರಿಯ ಚಲನಚಿತ್ರಗಳು ಚಿತ್ರೀಕರಣಗೊಂಡ ವೈವಿಧ್ಯಮಯ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯಲು ಅಗತ್ಯವಿರುವ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇಂಥ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಇದಕ್ಕಾಗಿ ಪ್ಯಾಕೇಜ್ ಮಾದರಿಯಲ್ಲಿ ಅವಕಾಶ ಕಲ್ಪಿಸುವ ಚಿಂತನೆಯೂ ಅಧಿಕಾರಿಗಳಲ್ಲಿದೆ. ಚಲನಚಿತ್ರ ಪ್ರವಾಸೋದ್ಯಮ ಅವಕಾಶಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಲು ಕಮರ್ಷಿಯಲ್, ಪ್ರಾದೇಶಿಕ ಭಾಷೆ, ಸೇರಿದಂತೆ ಎಲ್ಲ ಬಗೆಯ ಚಲನಚಿತ್ರಗಳು, ಸಾಕ್ಷ್ಯಚಿತ್ರ, ಟಿ.ವಿ ಪ್ರೊಡಕ್ಷನ್, ಒಟಿಟಿ ಮತ್ತು ಚಲನಚಿತ್ರಕ್ಕೆ ಸಂಬAಧಿಸಿದ ಇತರ ಪ್ಲಾಟ್‌ಫಾರಂಗಳನ್ನೂ ಚಲನಚಿತ್ರ ಪ್ರವಾಸೋದ್ಯಮದ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ.

ಪ್ರವಾಸಿ ತಾಣಗಳು ಅರಣ್ಯ ಇಲಾಖೆ, ಭಾರತಿಯ ಪುರಾತತ್ವ ಇಲಾಖೆ, ತೋಟಗಾರಿಕೆ ಇಲಾಖೆ, ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹೀಗೆ ವಿವಿಧ ಇಲಾಖೆಗಳ ಅಡಿಯಲ್ಲಿ ಇರುತ್ತದೆ. ಇಂಥ ಸಂದರ್ಭದಲ್ಲಿ ವಿವಿಧ ತಾಣಗಳಲ್ಲಿ ಚಲನಚಿತ್ರಗÀಳ ಚಿತ್ರೀಕರಣಕ್ಕಾಗಿ ಅನುಮತಿ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಇದೇ ಕಾರಣಕ್ಕೆ ಸಾಕಷ್ಟು ಉತ್ತಮ ಚಿತ್ರೀಕರಣಕ್ಕೆ ಯೋಗ್ಯ ಸ್ಥಳಗಳು ಇನ್ನು ಕೂಡ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಹಾಗಾಗಿ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಮುಂದಾಗಿದೆ. ಆನ್‌ಲೈನ್ ಮೂಲಕ ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಅನುಮತಿ ಸಿಗುವಂತಾಗಲು ಬೇಕಾದ ವೇದಿಕೆ ಸಿದ್ಧಪಡಿಸುವ ಕೆಲಸವೂ ನಡೆದಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಜಾರಿಗೆ ತಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಲ್ಲಿ ರಾಜ್ಯದಾದ್ಯಂತ ಇರುವ ಚಲನಚಿತ್ರ ಸ್ನೇಹಿ ತಾಣಗಳನ್ನು ಆದರ್ಶ ಚಿತ್ರೀಕರಣ ತಾಣಗಳಾಗಿ ಗುರುತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರವಾಸಿ ತಾಣಗಳ ವಿವರಗಳನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಪಡೆದು, ಈ ಬಗ್ಗೆ ಪರಿಶೀಲಿಸಿ ಚಲನಚಿತ್ರ ಸ್ನೇಹಿ ಪ್ರವಾಸಿ ತಾಣಗಳನ್ನು ಗುರುತಿಸಲು ಇಲಾಖಾ ಮಟ್ಟದಲ್ಲಿ ಕ್ರಮವಹಿಸಲಾಗುತ್ತಿದೆ.

ಪ್ರವಾಸಿ ತಾಣಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಸರ್ಕಾರ ಈತನಕ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ. ಈಗಾಗಲೇ 2020-26ರ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯಾದಾದ್ಯಂತ ಗುರುತಿಸಲಾಗಿದ್ದ 810 ಕೇಂದ್ರಗಳಲ್ಲಿ ಚಿತ್ರಿಕರಣ ನಡೆಸಲು ಅವಕಾಶ ಲಭ್ಯವಿದ್ದು, ಪ್ರವಾಸಿ ತಾಣಗಳಿಗೆ ಸಂಬAಧಪಟ್ಟ ಪ್ರಾಧಿಕಾರಿಗಳಿಂದ ಅನುಮತಿ ಪಡೆದು ಚಿತ್ರಿಕರಣ ಮಾಡುವ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಕೋರಿ ಪ್ರವಾಸೋದ್ಯಮ ಇಲಾಖೆಗೆ ಬರುವ ಮನವಿಗಳನ್ನು ಸಂಬAಧಪಟ್ಟ ಅರಣ್ಯ ಇಲಾಖೆ, ಭಾರತಿಯ ಪುರಾತತ್ವ ಇಲಾಖೆ, ತೋಟಗಾರಿಕೆ ಇಲಾಖೆ, ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸೇರಿದಂತೆ ಪ್ರವಾಸಿ ತಾಣದ ಮಾಲೀಕ ಇಲಾಖೆಗಳಿಗೆ ಅಥವಾ ಸಂಬAಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗುತ್ತದೆ. ಇದಲ್ಲದೇ, ಚಿತ್ರೀಕರಣದ ಅನುಮತಿ ಪಡೆಯಲು ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಸಹಕಾರವನ್ನೂ ನೀಡಲಾಗುತ್ತಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ವಿಶೇಷವಾಗಿ ಚಲನಚಿತ್ರ ಪ್ರವಾಸೋದ್ಯಮವನ್ನು ಗುರುತಿಸಿರುವುದರಿಂದ ಮುಂದೆ ಮತ್ತಷ್ಟು ಸುಲಭವಾಗಿ ಚಿತ್ರೀಕರಣ ಸೇರಿದಂತೆ ಚಲನಚಿತ್ರಕ್ಕೆ ಪೂರಕ ಚಟುವಟಿಕೆಗಳು ನಡೆಯಲು ಉತ್ತಮ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ.

ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಜಾರಿಗೆ ತಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಲ್ಲಿ ರಾಜ್ಯದಾದ್ಯಂತ ಇರುವ ಚಲನಚಿತ್ರ ಸ್ನೇಹಿ ತಾಣಗಳನ್ನು ಆದರ್ಶ ಚಿತ್ರೀಕರಣ ತಾಣಗಳಾಗಿ ಗುರುತಿಸಲು ಅವಕಾಶ ಕಲ್ಪಿಸಲಾಗಿದೆ. ಇಂಥ ಪ್ರವಾಸಿ ತಾಣಗಳ ವಿವರಗಳನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಪಡೆದು ಈ ಬಗ್ಗೆ ಪರಿಶೀಲಿಸಿ ಚಲನಚಿತ್ರ ಸ್ನೇಹಿ ಪ್ರವಾಸಿ ತಾಣಗಳನ್ನು ಗುರುತಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಚಲನಚಿತ್ರ ಚಿತ್ರೀಕರಣ ಸೇರಿದಂತೆ ಎಲ್ಲಾ ಚಟುವಟಿಕೆಗÀಳಿಗೂ ನಮ್ಮ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುತ್ತದೆ.

ಎಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವ

ಪ್ರಕೃತಿಯ ಸುಂದರ ತಾಣವಾಗಿರುವ ಕೊಡಗಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ಪೂರಕ ವಾತಾವರಣವಿದೆ. ಸಾಕಷ್ಟು ಜನಪ್ರಿಯ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿದೆ. ಬೆಳಕಿಗೆ ಬಾರದ ಇನ್ನೂ ಹಲವಾರು ಪ್ರಾಕೃತಿಕ ರಮ್ಯತೆಯಿಂದ ಕೂಡಿದ ಸ್ಥಳಗಳು ಇಲ್ಲಿವೆ. ಅವುಗಳೂ ತೆರೆಯ ಮೇಲೆ ಬರಬೇಕಿದೆ. ಸಿನಿಮಾ ಚಿತ್ರೀಕರಣಕ್ಕೆ ಇನ್ನಷ್ಟು ಪ್ರೋತ್ಸಾಹದಾಯಕ ವಾತಾವರಣ ಇಲ್ಲಿ ನಿರ್ಮಾಣ ಆಗಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ನಿರೀಕ್ಷೆ ಮೂಡಿಸಿದೆ.

ಗೌತಮ್ ಸೂರ್ಯ (ಗಯಾಝ್), ಸಿನಿಮಾ ತಂತ್ರಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net