

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯಶಬ್ಧಗಳಿಂದ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ದಿಯಾ ಸಿನಿಮಾದ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ಪೂರ್ವವಿಭಾಗದ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ (ಡಿಸಿಆರ್ಇ) ಠಾಣೆಯಲ್ಲಿಎಫ್ಐಆರ್ ದಾಖಲಾಗಿದೆ.
ರಾಜ್ಯಸರ್ಕಾರ ಡಿಸಿಆರ್ಇ ಠಾಣೆಗಳಿಗೆ ಮಾನ್ಯತೆ ನೀಡಿದ ಬಳಿಕ ರಾಜಧಾನಿಯಲ್ಲಿ ಜಾತಿ ದೌರ್ಜನ್ಯ ಸಂಬಂಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ನೇತಾಜಿ ನಗರದ ನಿವಾಸಿ ಶಶಿಕಲಾ ಎಂಬುವವರು ನೀಡಿದ ದೂರಿನನ್ವಯ, ಚಿತ್ರ ನಿರ್ಮಾಪಕ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ, ಅತಿಕ್ರಮ ಪ್ರವೇಶ, ಹಲ್ಲೆ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪಗಳ ಅನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ತೂರು ಹೋಬಳಿ ಕಸವನಹಳ್ಳಿ ಗ್ರಾಮದಲ್ಲಿರುವ ೩ ಎಕರೆ ೩೫ ಗುಂಟೆ ಜಮೀನನ್ನು ಭೋಗ್ಯಕ್ಕೆ ಪಡೆದಿರುವ ಶಶಿಕಲಾ ಹಾಗೂ ಕೋದಂಡಚಾರಿ ಎಂಬುವವರು ನರ್ಸರಿ ನಡೆಸುತ್ತಿದ್ದಾರೆ. ಆ.
೧೦ ರಂದು ಜಮೀನಿನ ಬಳಿ ಕಾರಿನಲ್ಲಿ ಆಗಮಿಸಿದ್ದ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಇತರರು ಬೀಗವನ್ನು ಮುರಿದು ಒಳಬಂದು, ಶಶಿಕಲಾ ಅವರಿಗೆ ಅವಾಚ್ಯಶಬ್ಧಗಳಿಂದ ಜಾತಿನಿಂದನೆ ಮಾಡಿದ್ದಾರೆ. ಜತೆಗೆ, ದೇಹದ ಖಾಸಗಿ ಅಂಗಗಳನ್ನು ಮುಟ್ಟಿ ಹಲ್ಲೆ ನಡೆಸಿದ್ದಾರೆ. ಜಮೀನು ಸ್ಥಳ ಬಿಟ್ಟುಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂದು ಶಶಿಕಲಾ ದೂರಿನಲ್ಲಿ ಆರೋಪಿಸಿದ್ದಾರೆ.
ನೋಟಿಸ್ ನೀಡಿ ವಿಚಾರಣೆ:
ಸಂತ್ರಸ್ತೆ ಶಶಿಕಲಾ ಅವರು ಮೊದಲು ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಲು ತೆರಳಿದ್ದು ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಹಲವು ಬಾರಿ ದೂರು ನೀಡಿದರೂ ಸಬೂಬು ಹೇಳಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯಿದೆ ಪ್ರಕರಣಗಳ ತನಿಖೆ ಸಲುವಾಗಿಯೇ ಸ್ಥಾಪಿಸಲಾಗಿರುವ ಡಿಸಿಆರ್ಇ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ಕಂಡು ಬಂದಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.