ಇಂಗ್ಲಿಷನ್ನು ಕೆಲಸಕ್ಕೆ ಇಟ್ಟುಕೊಳ್ಳಿ, ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಕಲಿಯಿರಿ: ಹಂಸಲೇಖ ಹೇಳಿಕೆ

Hamsalekha
Published on

ಮೈಸೂರು: ಇತ್ತೀಚೆಗೆ ಮಕ್ಕಳನ್ನು ಇಂಗ್ಲಿಷ್​ನಲ್ಲೇ ಓದಿಸಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಕೆಲಸ ಸಿಗುವುದು ಇಂಗ್ಲಿಷ್ ಇದ್ದರೆ ಮಾತ್ರ. ಆದರೆ, ಇಂಗ್ಲಿಷ್ ಅನ್ನು ಕೆಲಸಕ್ಕೆ ಇಟ್ಟುಕೊಳ್ಳಿ, ಕನ್ನಡದ ಅಸ್ಮಿತೆ ಉಳಿಸಲು ಕನ್ನಡವನ್ನು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು ಎಂದು ನಾದಬ್ರಹ್ಮ ಹಂಸಲೇಖ ಅವರು ತಿಳಿಸಿದರು.

ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದು, ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.

ಕವಿ ಪಟ್ಟ ಬೇಡ 

ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವರು ನನ್ನ ಆಯ್ಕೆಯನ್ನು ಕಾವ್ಯಕ್ಕೆ ಸಿಕ್ಕ ಗೌರವ ಅಂದರು. ಇನ್ನು ಕೆಲವರು ಸಾಮಾಜಿಕ ನ್ಯಾಯ ಎಂದು ಹೇಳಿದರು. ಆದರೆ, ಅದ್ಯಾವುದನ್ನು ವ್ಯಾಖ್ಯಾನಿಸಲು ಕಷ್ಟ. ನಾವು ಸಿನಿಮಾ ಬರಹಗಾರ. ನನ್ನನ್ನು ಕವಿ ಅಂದರೆ, ಕವಿ ಪಟ್ಟ ಬೇಡ ಎಂದು ಹೇಳುತ್ತೇನೆ. ಕವಿ ಪಟ್ಟ ತೆಗೆದುಕೊಂಡರೆ ಮೇಲು, ಮಧ್ಯ ಹಾಗೂ ಕೆಳಗೆ ಅಂತ ಮೂರು ಭಾಗ ಮಾಡುತ್ತಾರೆ. ದಸರಾ ಉದ್ಘಾಟನೆ ಸಿಕ್ಕಿದ್ದು, ಸಾಮಾಜಿಕ ನ್ಯಾಯ ಎಂದು ಹೇಳುತ್ತಾರೆ. ಆದರೆ, ಸಾಮಾಜಿಕ ನ್ಯಾಯಾವು ಅಲ್ಲ, ಕಾವ್ಯಕ್ಕೆ ಸಿಕ್ಕ ನ್ಯಾಯ ಎಂದೂ ಹೇಳುವುದಿಲ್ಲ ಎಂದರು.

ಸ್ಮಾರ್ಟ್ ವಿಲೇಜ್

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ವಿಚಾರವಾಗಿ ಮಾತನಾಡಿದ ಹಂಸಲೇಖ, ನಿಜಕ್ಕೂ ಇದನ್ನ ನಾವು ಗಮನಿಸಲೇಬೇಕಿದೆ. ರೈತರ ಬಗ್ಗೆ ನನಗೆ ಕಾಳಜಿ ಇದೆ. ಸ್ಮಾರ್ಟ್ ಸಿಟಿ ಮಾಬೇಕೆಂಬುದು ಕೆಲವರ ಆಶಯ. ಆದರೆ, ಇದು ನನಗೆ ಇಷ್ಟವಿಲ್ಲ. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಮಾಡುವುದು ಮುಖ್ಯ. ಸ್ಮಾರ್ಟ್ ವಿಲೇಜ್ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ನಮಗೂ ಹಿಂದಿ ಬೇಕಾಗಿಲ್ಲ

ನನಗೆ ಕನ್ನಡ ಒಂದಂಶ ಆಗಬೇಕು. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡಕ್ಕಾಗಿ ಕಾವಲಿಡಿ' ಕನ್ನಡವನ್ನು ರಕ್ಷಿಸಬೇಕು. ಹಿಂದಿ ಹೇರಿಕೆ ಇಂದಿನಿಂದ ಅಲ್ಲ ನಾನು 8ನೇ ತರಗತಿ ಇದ್ದಾಗಿನಿಂದಲೂ ಇದೆ. ದೆಹಲಿಗೆ ನಮ್ಮ ಕನ್ನಡ ಬೇಕಾಗಿಲ್ಲ ಹಾಗೆಯೇ ನಮಗೂ ಹಿಂದಿ ಬೇಕಾಗಿಲ್ಲ. ಆದರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ ಹಿಂದಿನ ಕಾಲದಿಂದಲೂ ನಡೆಯುತ್ತಿದೆ. ಆದರೆ, ಈಗ ಅದು ಜಾಸ್ತಿಯಾಗಿದೆ ಎಂದು ತಿಳಿಸಿದರು.

ಇಂಗ್ಲಿಷನ್ನು ನಿಮ್ಮ ಕೆಲಸಕ್ಕೆ ಇಟ್ಟುಕೊಳ್ಳಿ 

ಕನ್ನಡ ಶಾಲೆ ಮುಚ್ಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಹಂಸಲೇಖ, ಇಡೀ ಕರ್ನಾಟಕದ ಸೈಟ್‌ಗೆ ಕನ್ನಡವೇ ಪತ್ರ. ತಾಯಿಯು ತನ್ನ ಮಕ್ಕಳಿಗೆ ಮೊದಲು ಕನ್ನಡದ ಬಗ್ಗೆ ಹೇಳಿಕೊಡಬೇಕು. ಇತ್ತೀಚೆಗೆ ಮಕ್ಕಳನ್ನು ಇಂಗ್ಲಿಷ್​ನಲ್ಲೇ ಓದಿಸಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಕೆಲಸ ಸಿಗುವುದು ಇಂಗ್ಲಿಷ್ ಇದ್ದರೆ ಮಾತ್ರ. ಹಾಗಾಗಿ ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಹೋಗಿದ್ದಾರೆ. ಇಂಗ್ಲಿಷ್ ಅನ್ನು ನಿಮ್ಮ ಕೆಲಸಕ್ಕೆ ಇಟ್ಟುಕೊಳ್ಳಿ ಆದರೆ, ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು.ಇದರಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸನಾತನ ಧರ್ಮದ ಪ್ರಶ್ನೆ ಹಾಗೂ ಮಹಿಷಾ ದಸಾರ ಕುರಿತಾದ ಪ್ರಶ್ನೆಗೆ ಹಂಸಲೇಖ ಅವರು ಸನ್ನೆ ಮೂಲಕ ನೋ ಕಮೆಂಟ್ಸ್ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net