

ಬೆಂಗಳೂರು: ಸಹೋದರ- ಸಹೋದರಿಯರ ಬಾಂಧವ್ಯ ಸಾರುವ ಹಬ್ಬವೇ ರಕ್ಷಾ ಬಂಧನ. ಈ ದಿನ ಸಹೋದರಿಯರು ಸಹೋದರನಿಗೆ ರಾಖಿ ಕಟ್ಟುವ ಮೂಲಕ ಭ್ರಾತೃತ್ವ ಮೆರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್, ಸ್ಯಾಂಡಲ್‌ವುಡ್ ತಾರೆಯರು ಕೂಡ ರಕ್ಷಾಬಂಧನ ಆಚರಿಸಿದ್ದಾರೆ. ಬಾಲಿವುಡ್‌ನ ಸಂಜಯ್ ದತ್, ಅರ್ಜುನ್ ಕಪೂರ್, ಸಾರಾ ಅಲಿ ಖಾನ್ , ಸ್ಯಾಂಡಲ್‌ವುಡ್ ಡಾಲಿ ಧನಂಜಯ್, ಸಂಗೀತಾ ಶೃಂಗೇರಿ, ರಾಗಿಣಿ ದ್ವಿವೇದಿ, ಕಾರ್ತಿಕ್ ಮಹೇಶ್ ಸೇರಿ ಹಲವರು ರಾಖಿ ಹಬ್ಬವನ್ನು ಆಚರಿಸಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.
ನಟ-ನಟಿಯರ ಬಾಂಧವ್ಯ: ನಟ ಡಾಲಿ ಧನಂಜಯ್‌ಗೆ ‘ಕೋಟಿ’ ಸಿನಿಮಾದಲ್ಲಿ ತಂಗಿ ಪಾತ್ರ ನಿರ್ವಹಿಸಿದ್ದ ನಟಿ ತನುಜಾ ವೆಂಕಟೇಶ್ ಹಾಗೂ ನಟ ನಾಗಭೂಷಣ್ ಪತ್ನಿ ಪೂಜಾ ರಾಖಿ ಕಟ್ಟಿ, ಶುಭ ಕೋರಿದ್ದಾರೆ. ನಟಿ ಸಂಗೀತಾ ಶೃಂಗೇರಿ ಸಹೋದರ ಸಂತೋಷ್ ಕುಮಾರ್‌ಗೆ, ನಟಿ ರಾಗಿಣಿ ದ್ವಿವೇದಿ ಸಹೋದರ ರುದ್ರಾಕ್ಷ ದ್ವಿವೇದಿಗೆ ಹಾಗೂ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್‌ಗೆ ಸಹೋದರಿ ತೇಜಸ್ವಿನಿ ಮಹೇಶ್ ರಾಖಿ ಕಟ್ಟಿದ್ದಾರೆ. ಅಲ್ಲದೇ ಹಿರಿತೆರೆ-ಕಿರುತೆರೆಯ ನಟ-ನಟಿಯರು ಕೂಡ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಇನ್ನು ನಟ ಯಶ್- ನಟಿ ರಾಧಿಕಾ ಪಂಡಿತ್ ಮಗಳು ಐರಾ ತಮ್ಮ ಯಥರ್ವ್‌ನಿಗೆ ರಾಖಿ ಕಟ್ಟಿರುವುದನ್ನು ರಾಧಿಕಾ ಹಂಚಿಕೊಂಡಿದ್ದಾರೆ.
ನಿನ್ನನ್ನು ಪ್ರೀತಿಸುತ್ತೇನೆ: ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ತಮ್ಮ ತಂಗಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದ್ದಾರೆ. ಜಾಲತಾಣದಲ್ಲಿ ೆಟೋ ಹಂಚಿಕೊಂಡಿದ್ದಾರೆ. ‘ನೀನು ಸುಂದರವಾಗಿ ಬೆಳೆಯುತ್ತೀಯಾ ಎಂದು ಭಾವಿಸುತ್ತೇನೆ. ಅಲ್ಲದೇ ನಿನ್ನನ್ನು ಎಲ್ಲರೂ ಗೌರವದಿಂದ ಕಾಣುವ ಹಾಗೆಯೇ ಮುಂದುವರಿಯಬೇಕು. ಇದಕ್ಕಾಗಿ ನೀನು ಯುದ್ಧ ಮಾಡುವ ಅವಶ್ಯಕತೆ ಏನು ಇಲ್ಲ. ನಿನ್ನ ಬೆಂಬಲಕ್ಕೆ ಸದಾ ಇರುವೆ. ನೀನು ಸುರಕ್ಷಿತ ಹಾಗೂ ಸಂತೋಷವಾಗಿರು ಎಂದು ಹಾರೈಸುವೆ’ ಎಂದು ಬರೆದುಕೊಂಡಿದ್ದಾರೆ.