

ಬೆಂಗಳೂರು:
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬರಿ ೪೭ ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಪಡೆದು ವಂಚಿಸಿದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಪಡೆಯ ಹೆಡ್ ಕಾನ್‌ಸ್ಟೇಬಲ್, ಆತನ ಪತ್ನಿ ಸೇರಿ ಮೂವರ ವಿರುದ್ಧ ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನ್ನಪೂರ್ಣೇಶ್ವರಿನಗರ ನಿವಾಸಿ ಭಾಗ್ಯ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು, ಚಾಮರಾಜಪೇಟೆಯಲ್ಲಿರುವ ಸಿಎಆರ್ ಪ್ರಧಾನ ಕಚೇರಿಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಎಚ್.ಆರ್.ಪ್ರಶಾಂತ್ ಕುಮಾರ್ ಮತ್ತು ಆತನ ಪತ್ನಿ ದೀಪಾ ಹಾಗೂ ಸ್ನೇಹಿತ ಡಿ.ಪ್ರಶಾಂತ್ ಎಂಬವರ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹೆಡ್‌ಕಾನ್‌ಸ್ಟೇಬಲ್ ಸೇರಿ ಮೂವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರೆ ಭಾಗ್ಯಗೆ ದಿವ್ಯಾ ಮತ್ತು ಕಾರ್ತಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪರಿಚಯಸ್ಥರ ಮೂಲಕ ಹೆಡ್‌ಕಾನ್‌ಸ್ಟೇಬಲ್ ಪ್ರಶಾಂತ್ ಕುಮಾರ್ ಪರಿಚಯವಾಗಿದೆ. ಈ ವೇಳೆ ತಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗದ ಬಗ್ಗೆ ಭಾಗ್ಯ ಚರ್ಚಿಸಿದ್ದಾರೆ. ಆಗ ಆರೋಪಿ, ತಾನು ಎಡಿಜಿಪಿ ಉಮೇಶ್ ಕುಮಾರ್ ಕಾರು ಚಾಲಕನಾಗಿದ್ದು, ಕೆಲ ಸರ್ಕಾರಿ ಅಧಿಕಾರಿಗಳು ಮತ್ತು ಕೆಪಿಎಸ್‌ಸಿಯಲ್ಲೂ ಕೆಲವರ ಪರಿಚಯವಿದೆ. ಮೂರು ತಿಂಗಳಲ್ಲಿ ಪುತ್ರನಿಗೆ ಎಸ್‌ಡಿಎ ಹಾಗೂ ಪುತ್ರಿಗೆ ಎಫ್‌ಡಿಎ ಕೆಲಸ ಕೊಡಿಸುತ್ತೇನೆ ಅದಕ್ಕೆ ೪೫ ಲಕ್ಷ ರೂ. ಆಗುತ್ತದೆ ಎಂದು ಹೇಳಿದ್ದರು. ಇದಕ್ಕೆ ದೂರುದಾರರು ಹಣ ಕೊಡಲು ಒಪ್ಪಿಕೊಂಡು ನಂತರ ಮುಂಗಡವಾಗಿ ಎರಡು ಹಂತದಲ್ಲಿ ೫.೫ ಲಕ್ಷ ರೂ. ಕೊಟ್ಟಿದ್ದರು. ಬಳಿಕ ಪ್ರಶಾಂತ್ ಕುಮಾರ್ ಪತ್ನಿ ದೀಪಾ ಕೂಡ ಹಣ ಕೊಡಿ ಕೆಲಸ ಮಾಡಿಕೊಡುತ್ತಾರೆ ಎಂದು ಒತ್ತಾಯಿಸಿದ್ದರು.
ನಕಲಿ ನೇಮಕಾತಿ ಆದೇಶ:
ಈ ನಡುವೆ ಹೆಡ್‌ಕಾನ್‌ಸ್ಟೇಬಲ್ ಪ್ರಶಾಂತ್ ಕುಮಾರ್, ದೂರುದಾರೆ ಭಾಗ್ಯಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ ಮಂಜುನಾಥ್ ಪ್ರಸಾದ್ ಅವರ ಆಪ್ತ ಸಹಾಯಕ ಎಂದು ಸುಳ್ಳು ಹೇಳಿ ಪ್ರಶಾಂತ್ ಎಂಬಾತನನ್ನು ಪರಿಚಯಿಸಿದ್ದಾನೆ. ಆತ ಕೂಡ ಬೇಗನೆ ಹಣ ಕೊಟ್ಟರೆ ಕೆಲಸ ಆಗುತ್ತದೆ ಎಂದು ಒತ್ತಾಯಿಸಿದ್ದ. ಹೀಗಾಗಿ ಪತಿಯವರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆದು ೧೦ ಲಕ್ಷ ರೂ. ಸೇರಿ ಹಂತ-ಹಂತವಾಗಿ ಒಟ್ಟು ೪೭ ಲಕ್ಷ ರೂ. ಕೊಡಲಾಗಿತ್ತು. ಆ ನಂತರ ೨೦೨೪ರ ಜೂನ್ ೧೨ರಂದು ಪುತ್ರನಿಗೆ ನೀರಾವರಿ ಇಲಾಖೆ ಹಾಗೂ ಪುತ್ರಿಗೆ ಬೇರೊಂದು ಇಲಾಖೆಯಲ್ಲಿ ಹುದ್ದೆ ಸಿಕ್ಕಿದ್ದು, ಕೆಪಿಎಸ್‌ಸಿಯ ೨ನೇ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಇಬ್ಬರ ಹೆಸರಿದೆ ಎಂದು ಪ್ರತಿಯನ್ನು ನೀಡಿದ್ದಾನೆ. ಬಳಿಕ ಮತ್ತೆ ೫ ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ನಂತರ ಆರೋಪಿ ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ೫೮ ಲಕ್ಷ ರೂ. ಮೌಲ್ಯದ ಚೆಕ್ ನೀಡಿದ್ದಾರೆ. ಆದರೆ, ಆ ಚೆಕ್ ಬೌನ್ಸ್ ಆಗಿದೆ. ಬಳಿಕ ನಗದು ರೂಪದಲ್ಲಿ ಹಣ ಕೇಳಿದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಭಾಗ್ಯ ದೂರಿನಲ್ಲಿ ಆರೋಪಿಸಿದ್ದಾರೆ.