

ಬೆಂಗಳೂರು: ಮ್ಯೂಸಿಕ್ ಕಂಪನಿಯ ಅನುಮತಿ ಪಡೆಯದೆ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಎರಡು ಹಾಡುಗಳನ್ನು ಬಳಸಿದ ಆರೋಪದಡಿ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ಅವರ ಮಾಲೀಕತ್ವದ ಚಿತ್ರ ನಿರ್ಮಾಣ ಕಂಪನಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಹಕ್ಕುಸ್ವಾಮ್ಯ ಕಾಯ್ದೆಯಡಿ ದೂರು ದಾಖಲಾಗಿದೆ.
ಎಂಆರ್‌ಟಿ ಮ್ಯೂಸಿಕ್ ಕಂಪನಿ ಪಾಲುದಾರ ನವೀನ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಪರಂವ್ಹ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ಮತ್ತು ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ರಕ್ಷಿತ್ ಶೆಟ್ಟಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ನವೀನ್ ಕುಮಾರ್ ಪಾಲುದಾರಿಕೆಯ ಎಂಆರ್‌ಟಿ ಮ್ಯೂಸಿಕ್ ಕಂಪನಿಯು ಚಲನಚಿತ್ರ ಹಾಡು, ಆಲ್ಬಮ್ ಹಾಡುಗಳು ಸೇರಿದಂತೆ ಇತರೆ ಹಾಡುಗಳ ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕು ಖರೀದಿಸಿ, ಪ್ರಸಾರ ಮಾಡುವ ಕಂಪನಿಯಾಗಿದೆ. ಪರಂವ್ಹ ಸ್ಟುಡಿಯೋಸ್ ಕಂಪನಿ ಹಾಗೂ ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಬ್ಯಾಚುಲರ್ ಪಾರ್ಟಿ ಸಿನಿಮಾಕ್ಕೆ ಎಂಆರ್‌ಟಿ ಮ್ಯೂಸಿಕ್ ಕಂಪನಿ ಹಕ್ಕುಸ್ವಾಮ್ಯ ಹೊಂದಿರುವ ನ್ಯಾಯ ಎಲ್ಲಿದೆ ಹಾಗೂ ಗಾಳಿ ಮಾತು ಸಿನಿಮಾಗಳ ಎರಡು ಹಾಡು ಬಳಕೆ ಮಾಡುವ ಸಂಬಂಧ ರಾಜೇಶ್ ಎಂಬುವವರು ೨೦೨೪ರ ಜನವರಿಯಲ್ಲಿ ಎಂಆರ್‌ಟಿ ಮ್ಯೂಸಿಕ್ ಕಂಪನಿ ಜತೆಗೆ ಮಾತುಕತೆ ನಡೆಸಿದ್ದರು. ಆದರೆ, ಮಾತುಕತೆ ಫಲಪ್ರದವಾಗಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅನುಮತಿ ಪಡೆಯದೆ ಹಾಡು ಬಳಕೆ:
ಈ ನಡುವೆ ಕಳೆದ ಮಾರ್ಚ್‌ನಲ್ಲಿ ಅಮೇಜಾನ್ ಪ್ರೈಮ್ ಒಟಿಟಿಯಲ್ಲಿ ಬ್ಯಾಚುಲರ್ ಪಾರ್ಟಿ ಸಿನಿಮಾ ಬಿಡುಗಡೆಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಎಂಆರ್‌ಟಿ ಮ್ಯೂಸಿಕ್ ಹಕ್ಕುಸ್ವಾಮ್ಯ ಹೊಂದಿರುವ ನ್ಯಾಯ ಎಲ್ಲಿದೆ ಮತ್ತು ಒಮ್ಮೆ ನಿನ್ನನ್ನು ಎಂಬ ಹಾಡುಗಳನ್ನು ಬಳಸಲಾಗಿದೆ. ಯಾವುದೇ ಹಕ್ಕುಸ್ವಾಮ್ಯ ಹಾಗೂ ಖರೀದಿ ಹಕ್ಕು ಪಡೆಯದೇ ಕಾನೂನು ಬಾಹಿರವಾಗಿ ಪರಂವ್ಹ ಸ್ಟುಡಿಯೋಸ್ ಕಂಪನಿ ಹಾಗೂ ನಟ ರಕ್ಷಿತ್ ಶೆಟ್ಟಿ ಅವರು ನಮ್ಮ ಕಂಪನಿಯ ಎರಡು ಹಾಡುಗಳನ್ನು ಬಳಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನವೀನ್ ಕುಮಾರ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದು-ಇಂದು ಕಿರಿಕ್
ಈ ಹಿಂದೆ ಕಿರಿಕ್‌ಪಾರ್ಟಿ ಚಿತ್ರದಲ್ಲಿ ಅನುಮತಿ ಪಡೆಯದೇ ಹಾಡು ಬಳಕೆ ಮಾಡಿದ್ದ ಆರೋಪದ ಸಂಬಂಧ ಲಹರಿ ವೇಲು ಅವರು ನಟ ರಕ್ಷಿತ್ ಶೆಟ್ಟಿ ಸೇರಿ ಕಿರಿಕ್‌ಪಾರ್ಟಿ ಚಿತ್ರ ತಂಡದ ಮೇಲೆ ದೂರು ದಾಖಲಿಸಿದ್ದರು. ಅದು ಸಾಕಷ್ಟು ವಿವಾದಕ್ಕೆ ಕಾರಣವಾಗಿ ನಂತರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿತ್ತು. ಇದೀಗ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿಯೂ ಅನುಮತಿ ಪಡೆಯದೇ ಎರಡು ಬಳಕೆ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.