ಟ್ಯಾಕ್ಸ್ ವಾರ್ ವಿರುದ್ಧ ಒಟ್ಟಿಗೇ ಹೋರಾಡುವ

ವಿಜಯವಾಣಿ (5)
Published on

ನವದೆಹಲಿ: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ದಿನದಿಂದ ಚೀನಾ ಹಾಗೂ ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದ್ದು, ಇದೀಗ ನಾವಿಬ್ಬರೂ ಸೇರಿ ಅಮೆರಿಕ ವಿರುದ್ಧ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ಭಾರತಕ್ಕೆ ಚೀನಾ ಸಲಹೆ ನೀಡಿದೆ.

ಭಾರತ ಪ್ರವಾಸದಲ್ಲಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ್ದು, ಅಮೆರಿಕ ವಿಧಿಸುತ್ತಿರುವ ಸುಂಕದ ವಿರುದ್ಧ ಚೀನಾ ಹಾಗೂ ಭಾರತ ಒಟ್ಟಿಗೆ ಸೇರಿ ಹೋರಾಟ ನಡೆಸಬೇಕಿದೆ. ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವ ಬದಲಾಗಿ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳ ಬೇಕಿದೆ. ಏಷ್ಯಾದ ಎರಡು ಬಹುದೊಡ್ಡ ದೇಶಗಳು ಒಂದಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬಲವರ್ಧನೆ ಪ್ರದರ್ಶಿಸಿದಂತಾಗಲಿದೆ ಎಂದು ಹೇಳಿದ್ದಾರೆ. ಸದ್ಯ ಚೀನಾ ನೀಡಿದ ಸಲಹೆ ಸಂಬಂಧ ಭಾರತ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತಾಗಿ ಗುರುವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್, ಭಾರತ ಸರ್ಕಾರ ಚೀನಾ ಜತೆ ಉತ್ತಮ ಸಂಬಂಧಕ್ಕಾಗಿ ಸಕಾರಾತ್ಮಕ ಮಾರ್ಗ ಅನುಸರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕಾಕ್ಕೆ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕವನ್ನು ಶೇ.10ರಿಂದ ಶೇ.20ಕ್ಕೆ ಹೆಚ್ಚಿಸುವ ಆದೇಶಕ್ಕೆ ಮಂಗಳವಾರ ಸಹಿ ಹಾಕಿದ್ದರು. ಈ ಬೆಳವಣಿಗೆಗಳ ಬಳಿಕ ಚೀನಾದಲ್ಲೂ ಅಮೆರಿಕ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಅಮೆರಿಕ ವಿರುದ್ಧ ಹೋರಾಟ ನಡೆಸಲು ಸಜ್ಜಾದಂತೆ ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net