

ಶಿವಮೊಗ್ಗ: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ವೀರಶೈವ-ಲಿಂಗಾಯಿತರು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯಿತರು ಅಥವಾ ಹಿಂದು ಎಂದು ಬರೆಯಿಸಿ, ಜಾತಿ ಕಾಲಂ 9ರಲ್ಲಿ ಲಿಂಗಾಯಿತ ಅಥವಾ ವೀರಶೈವ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಎನ್. ಸಜ್ಜನ್ ಹೇಳಿದರು.
ಈಗಾಗಲೇ ಜಾತಿಗಣತಿ ಆರಂಭವಾಗಿದ್ದು, ಮಹಾಸಭಾ ಮೊದಲಿನಿಂದಲೂ ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಅಧಿಕೃತ ಮಾನ್ಯತೆ ದೊರಕಬೇಕೆಂದು ಪ್ರತಿಪಾದಿಸುತ್ತಿದೆ. ಮಾನ್ಯತೆ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಹಾಲಿ ಗಣತಿಯಲ್ಲಿ ಜಾತಿ ಮತ್ತು ಉಪಜಾತಿಗಳಿಗೆ ಪ್ರಾಮುಖ್ಯತೆ ಇದೆಯೇ ವಿನಃ ಧರ್ಮಕ್ಕಲ್ಲ. ಹಾಗಾಗಿ ಜಾತಿ ಮತ್ತು ಉಪಜಾತಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಣತಿ ವೇಳೆ ಧರ್ಮದ ಕಾಲಂನಲ್ಲಿ ಸಂಕೇತ 11ರಲ್ಲಿ ನೀಡಿರುವ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯಿತ ಅಥವಾ ತಮ್ಮ ವಿವೇಚನೆಯಂತೆ ನಮೂದಿಸಬೇಕು. ಆದರೆ ಜಾತಿ ಕಾಲಂ 9ರಲ್ಲಿ ಲಿಂಗಾಯಿತ ಸಮುದಾಯಕ್ಕೆ ಕೊಟ್ಟ ಸಂಕೇತ ಸಂಖ್ಯೆ ಎ-0832 ಅಥವಾ ವೀರಶೈವ ಸಮುದಾಯಕ್ಕೆ ನೀಡಿರುವ ಸಂಖ್ಯೆ ಎ-1522 ಎಂದು ನೀಡಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಎನ್.ಎಸ್.ಕುಮಾರ್, ಮಲ್ಲಿಕಾರ್ಜುನ ಕಾನೂರ್, ಅನಿಲ್ ಪಟೇಲ್, ಪುಷ್ಪಾ ಹಾಲಪ್ಪ, ಸುಧಾ, ಗೀತಾ, ಎನ್.ಜಿ.ಗಿರೀಶ್, ಸಚ್ಚಿನ್‌ಪೂಜಾರ್, ಮೋಹನ್‌ಕುಮಾರ್, ತೇಜಸ್ವಿ, ವಿಕ್ರಂ, ಹಾಲಪ್ಪ ಸುದ್ದಿಗೋಷ್ಠಿಯಲ್ಲಿದ್ದರು.