ಕಾರ್ಮಿಕರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Published on

ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಖಾಸಗಿ ಸಂಸ್ಥೆಯ ಕಾಫಿ ತೋಟದಲ್ಲಿ ಇಬ್ಬರು ಕಾರ್ಮಿಕರ ನಡುವೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಜೇನು ಕುರುಬರ ರಘು (45) ಕೊಲೆಯಾದ ಕಾರ್ಮಿಕ. ಚೆನ್ನಯ್ಯನಕೋಟೆಯ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಪಂಜರಿ ಎರವರ ಚಾಮ (52) ಹಾಗೂ ಜೇನು ಕುರುಬರ ರಘು ಮಂಗಳವಾರ ಪಾಲಿಬೆಟ್ಟ ಪಟ್ಟಣಕ್ಕೆ ತೆರಳಿ ಬಾಳೆಗೊನೆ ಮಾರಾಟ ಮಾಡಿದ್ದರು. ಬಳಿಕ ಮದ್ಯಪಾನ ಮಾಡಿ ಲೈನ್ ಮನೆಗೆ ಬರುತ್ತಿದ್ದ ವೇಳೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಚಾಮ ದೊಣ್ಣೆಯಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗಳಿಂದ ರಘು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ.

ರಾತ್ರಿಯಾದರೂ ರಘು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಮುಂಜಾನೆ ಹುಡುಕಾಡಿದ್ದಾರೆ. ಕಾಫಿ ತೋಟಕ್ಕೆ ತೆರಳುವ ರಸ್ತೆ ಬದಿಯಲ್ಲಿ ರಘು ಮೃತದೇಹ ಕಾಣಿಸಿದೆ. ಈ ಬಗ್ಗೆ ರಘು ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವೃತ್ತ ನಿರೀಕ್ಷಕ ರಾಜು, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಮತ್ತು ಅಪರಾಧ ವಿಭಾಗದ ಠಾಣಾಧಿಕಾರಿ ಶಿವಣ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಚಾಮನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net