

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಅನ್ಯಾಯದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿವಿಧ ಹಂತದ ಹೋರಾಟಕ್ಕೆ ತೀರ್ಮಾನಿಸಿಯಾಗಿದೆ. ರಾಜ್ಯ ನಾಯಕರ ಮೂರು ತಂಡಗಳು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ನಾಲ್ಕನೇ ತಂಡಕ್ಕೆ ಅವಕಾಶ ಕೂಡದು ಎಂದು ಪಕ್ಷದ ವರಿಷ್ಠರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ನಿವಾಸದಲ್ಲಿ ಬುಧವಾರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 15 ಜನ ಪ್ರಮುಖ ಸಭೆ ಸೇರಿದ್ದು, ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದರು.
ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಕೈಗೊಂಡ ನಿರ್ಧಾರದಂತೆ ಮೂರು ತಂಡದಿಂದ ಪ್ರವಾಸ ನಡೆಯಲಿದೆ. ಯಾವುದೇ ಕಾರಣಕ್ಕೂ ನಾಲ್ಕನೇ ತಂಡಕ್ಕೆ ಅವಕಾಶ ಕೊಡಬಾರದು ಎಂದು ದೆಹಲಿಗೆ ತೆರಳಿ ನಾಯಕರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ನಾವು ಯಾರ ವಿರುದ್ಧವೂ ಪರ್ಯಾಯವಾಗಿ ಸಭೆ ನಡೆಸಿಲ್ಲ. ನಮ್ಮ ಹೋರಾಟ ಪಕ್ಷದ ಉಳಿವಿಗಾಗಿ ಹೊರತು ಬೇರೇನಿಲ್ಲ. ಬಿಜೆಪಿಯಲ್ಲಿ ಯಾವುದೇ ರೀತಿಯ ಬಣಗಳಿಲ್ಲ. ಅಂತಹ ಚಟುವಟಿಕೆಗಳಿಗೆ ವರಿಷ್ಠರು ಅವಕಾಶ ಕೊಡುವುದಿಲ್ಲ ಎಂದರು.
ಪಕ್ಷದ ಯಾರೇ ಆಗಲಿ ಯಾವುದೇ ಹೋರಾಟ ನಡೆಸುವುದಿದ್ದರೆ ರಾಜ್ಯಾಧ್ಯಕ್ಷರ ಒಪ್ಪಿಗೆ ಪಡೆಯಬೇಕು. ನಮ್ಮದು ರಾಷ್ಟ್ರೀಯ ಪಕ್ಷ ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ಹೇಗೆ ಅಭಿಯಾನ ನಡೆಸುತ್ತಾರೆ ? ಎಂದು ಪ್ರಶ್ನಿಸಿದರು.
ರಾಜ್ಯಾಧ್ಯಕ್ಷರ ಮೂಲಕವೇ ಎಲ್ಲವೂ ನಡೆಯಬೇಕು. ವರಿಷ್ಠರ ತೀರ್ಮಾನದಂತೆ ವಿಜಯೇಂದ್ರ ಕೆಲಸ ಮಾಡುತ್ತಿದ್ದಾರೆ. ಯುವಕನಾಗಿ ಅವರು ಒಳ್ಳೆಯ ಕೆಲಸ ಮಾಡುವಾಗ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹಿರಿಯರು. ಪ್ರತ್ಯೇಕ ಹೋರಾಟ ಮಾಡಬಾರದು. ಪಕ್ಷದ ಅಧ್ಯಕ್ಷರ ಕೈ ಬಲಪಡಿಸುವುದು ಮುಖ್ಯವಾಗಿದೆ. ಆದರೆ ರಾಜ್ಯಾಧ್ಯಕ್ಷರ ಮಾರ್ಗದರ್ಶನದಿಂದ ನಾವು ಈ ಸಭೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಮಗೆ ನಾವೇ ಸೇರಿಕೊಂಡು ಸಭೆ ಮಾಡುತ್ತೇವೆ ಅನಗತ್ಯವಾಗ್ಿ ಗೊಂದಲ ಸೃಷ್ಟಿ ಮಾಡಬಾರದು. ಕಾಂಗ್ರೆಸ್ ವಿರುದ್ಧ ಹೇಳಿಕೆ ಕೊಡಬೇಕು, ಆದರೆ ನಮ್ಮ ಪಕ್ಷದ ವಿರುದ್ಧವೇ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಆಕ್ಷೇಪಿಸಿದರು.