ಮತಗಳ್ಳತನ ವಿರುದ್ಧ ಹೋರಾಟ

srl congress
ಶಿರಾಳಕೊಪ್ಪದಲ್ಲಿ ಮತಗಳ್ಳತನ ವಿರುದ್ಧದ ಸಹಿ ಸಂಗ್ರಹ ಅಭಿಯಾನಕ್ಕೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ ಚಾಲನೆ ನೀಡಿದರು. ನಯಾಜ್ ಅಹಮದ್, ಮಮತಾ ನಿಂಗಪ್ಪ, ಲಲಿತಮ್ಮ, ರಾಜಸಾಬ್, ಗಣೇಶ್ ಭಂಡಾರಿ ಇತರರಿದ್ದರು.
Published on

ಶಿರಾಳಕೊಪ್ಪ: ಪ್ರಜಾಪ್ರಭುತ್ವವನ್ನು ಉಳಿಸಲು ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟ ಆರಂಭಿಸಿದೆ. ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ವೋಟ್ ಚೋರ್, ಗದ್ದಿ ಛೋಡ್ ಪ್ರಜಾಪ್ರಭುತ್ವ ಉಳಿಸಿ ಹೋರಾಟ ಎಂಬ ಘೋಷಣೆಯಡಿ ಜನರನ್ನು ಜಾಗೃತಿಗೊಳಿಸುವ ಅಭಿಯಾನ ನಡೆಸುತ್ತಿದ್ದಾರೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಸೋಮವಾರ ಆಯೋಜಿಸಿದ್ದ ಮತಗಳ್ಳತನದ ವಿರುದ್ಧ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, ಮತಗಳ್ಳತನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ರಾಹುಲ್ ಗಾಂಧಿ ಅವರು ಪಾರದರ್ಶಕ ಚುನಾವಣಾ ವ್ಯವಸ್ಥೆಗಾಗಿ ಹೋರಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯದೆ ಸತ್ಯವನ್ನು ಸಾಬೀತುಮಾಡುವ ನಾಯಕತ್ವ ನಮ್ಮದು ಎಂದರು.

ಹಲವು ರಾಜ್ಯಗಳಲ್ಲಿ ಪ್ರತಿಭಟನೆ, ಜನಜಾಗೃತಿ ಸಭೆಗಳು ನಡೆಯುತ್ತಿವೆ. ದೇಶಾದ್ಯಂತ ಚುನಾವಣಾ ಪ್ರಕ್ರಿಯೆ ಶುದ್ಧೀಕರಣಕ್ಕೆ ಮುಂದಡಿ ಇಡಲಾಗಿದೆ. ಮತಗಟ್ಟೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ನಾಗರಿಕರು ಒಂದಾಗಿ ನಿಲ್ಲಬೇಕು. ಇವಿಎಂ ಬದಲು ಹಳೆಯ ಮತಪತ್ರ ವ್ಯವಸ್ಥೆಯನ್ನು ಪುನಃ ತರಬೇಕು ಎಂಬ ಬೇಡಿಕೆಯೂ ಪ್ರಸ್ತಾಪವಾಗಿದೆ. ಪ್ರತಿ ಬೂತ್‌ನಲ್ಲಿ ಪಾರದರ್ಶಕ ಮತದಾನ ನಡೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು.

ಶಿರಾಳಕೊಪ್ಪ ಟೌನ್ ಕಾಂಗ್ರೆಸ್ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಮತಗಟ್ಟೆಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಹಾಳು ಮಾಡುತ್ತಿವೆ. ಜನರ ವೋಟು ಜನರ ಕೈಯಲ್ಲೇ ಸುರಕ್ಷಿತವಾಗಿರಬೇಕು. ಇವಿಎಂಗಳ ಬಗ್ಗೆ ಅನುಮಾನವಿದೆ. ಬ್ಯಾಲೆಟ್ ವ್ಯವಸ್ಥೆ ಮಾತ್ರವೇ ನ್ಯಾಯ ನೀಡಬಲ್ಲದು ಎಂದರು.

ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಲಲಿತಮ್ಮ, ಸದಸ್ಯೆ ನಿರ್ಮಲಾ, ನಾಮಿನಿ ಸದಸ್ಯರಾದ ರಾಜಸಾಬ್, ಗಣೇಶ್ ಭಂಡಾರಿ, ಶಿವಯೋಗಪ್ಪ, ತೇಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ, ಬಗರ್‌ಹುಕುಂ ಕಮಿಟಿ ಸದಸ್ಯ ಸುನಿಲ್ ಫಕೀರಪ್ಪ, ಶಿವಾನಂದ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net