ಐದನೇ ದಿನ 870 ಸಾರ್ವಜನಿಕ ಗಣೇಶನಿಗೆ ವಿದಾಯ

Public Ganesh immersion procession
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ 60ನೇ ವರ್ಷ ಪ್ರತಿಷ್ಠಾಪಿಸಲ್ಪಟ್ಟಿರುವ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ವೀರಗಾಸೆ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು.
Published on

ಶಿವಮೊಗ್ಗ: ಪ್ರಸಕ್ತ ವರ್ಷ ಗಣೇಶೋತ್ಸವವು ಸತತ ಐದನೇ ದಿನವೂ ಜಿಲ್ಲಾದ್ಯಂತ ಶಾಂತಯುತವಾಗಿ ನೆರವೇರಿತು. ವಿಶೇಷವಾಗಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ ಗೌಡ ಸಾರಸ್ವತ ಕಲ್ಯಾಣ ಮಂದಿರದಲ್ಲಿ 60ನೇ ವರ್ಷ ಪ್ರತಿಷ್ಠಾಪಿಸಲ್ಪಟ್ಟಿರುವ ಗಣೇಶಮೂರ್ತಿ ಒಳಗೊಂಡಂತೆ 5ನೇ ದಿನ 870 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಜಿಲ್ಲಾದ್ಯಂತ 3,672 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಕಳೆದ ನಾಲ್ಕು ದಿನಗಳಲ್ಲಿ 1,500ಕ್ಕೂ ಅಧಿಕ ಮೂರ್ತಿಗಳನ್ನು ನದಿ, ಹಳ್ಳ, ಕೆರೆ, ಚಾನಲ್, ತೆರೆದ ಬಾವಿಗಳಲ್ಲಿ ವಿಸರ್ಜಿಸಲಾಗಿತ್ತು. ಭಾನುವಾರ 870 ಮೂರ್ತಿಗಳಿಗೆ ಭಕ್ತರು ಮಳೆ ನಡುವೆಯೂ ಶ್ರದ್ಧಾಭಕ್ತಿಯಿಂದ ಬೀಳ್ಕೊಟ್ಟರು. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ಒಳಗೊಂಡಂತೆ ಎಲ್ಲ ಭಾಗದಲ್ಲೂ ಮೂರ್ತಿಗಳನ್ನು ವಿಸರ್ಜಿಸಿದರು.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ ಗೌಡ ಸಾರಸ್ವತ ಕಲ್ಯಾಣ ಮಂದಿರದಲ್ಲಿ 60ನೇ ವರ್ಷ ಪ್ರತಿಷ್ಠಾಪಿಸಲ್ಪಟ್ಟಿರುವ ಗಣೇಶ ಮೂರ್ತಿ ವಿಸರ್ಜನೆಗೊಂಡಿತು. ಸಂಜೆ ಆರಂಭವಾದ ಮೆರವಣಿಗೆಯಲ್ಲಿ ಪಿಲಿಕುಳದ ಹುಲಿವೇಷ, ಕಲ್ಲಡ್ಕದ ತಟ್ಟಿರಾಯ, ರಾಣೆಬೆನ್ನೂರಿನ ವೀರಗಾಸೆ ತಂಡ ಪ್ರಮುಖ ಆಕರ್ಷಣೆಯಾಗಿದ್ದವು. ಮೆರವಣಿಗೆಯಲ್ಲಿ ಜಿಎಸ್‌ಬಿ ಮಹಿಳಾ ಮಂಡಳಿ ಸದಸ್ಯರು ನೃತ್ಯ, ಭಜನೆ ಪ್ರಸ್ತುತಪಡಿಸಿದರು. ಮೆರವಣಿಗೆ ಬಳಿಕ ಗಣೇಶ ಮೂರ್ತಿಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಮಾರ್ಗದುದ್ದಕ್ಕೂ ಪ್ರತಿಯೊಬ್ಬರಿಗೂ ಪ್ರಸಾದ ರೂಪದಲ್ಲಿ ಲಡ್ಡು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net