

ಲುಸೈಲ್: ಫಿಫಾ ವಿಶ್ವಕಪ್ ಟೂರ್ನಿಯ ಗೆಲುವಿನ ಕನಸು ಭಗ್ನವಾಗುತ್ತಿದ್ದಂತೆ ಕ್ರೀಡಾಂಗಣದಲ್ಲೇ ಅತ್ಯಂತ ನೋವಿನಲ್ಲಿ ಕುಳಿತ ಫ್ರಾನ್ಸ್ನ ಸ್ಟಾರ್ ಆಟಗಾರ ಎಂಬೆಪ್ಪೆ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸಮಾಧಾನ ಪಡಿಸಿದರು.
ಕತಾರ್ನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 36 ವರ್ಷಗಳ ಬಳಿಕ ಫುಟ್ಬಾಲ್ ಜಗತ್ತಿನ ಚಾಂಪಿಯನ್ ಪಟ್ಟವೇರಿತು. ಅರ್ಜೆಂಟೀನಾ ವಿರುದ್ಧ ಫೈನಲ್ನಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಫ್ರಾನ್ಸ್ ತಂಡ ಹೋರಾಡಿತ್ತಾದರೂ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ಆಟದ ಎದುರು ಮಣಿಯಿತು. ಸತತ 2ನೇ ಬಾರಿ ಪ್ರಶಸ್ತಿ ಜಯಿಸುವ ಫ್ರಾನ್ಸ್ ಕನಸು ಭಗ್ನಗೊಂಡಿದ್ದು, ಫ್ರಾನ್ಸ್ ಯುವತಾರೆ ಕೈಲಿಯಾನ್ ಎಂಬಪೆ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ಸಾಹಸವೂ ವ್ಯರ್ಥಗೊಂಡತು. ಗೆಲುವಿನ ಕನಸು ಭಗ್ನವಾಗುತ್ತಿದ್ದಂತೆ ಕ್ರೀಡಾಂಗಣದಲ್ಲೇ ಅತ್ಯಂತ ನೋವಿನಲ್ಲಿ ಕುಳಿತ ಎಂಬೆಪ್ಪೆ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸಮಾಧಾನಪಡಿಸಿದರು. ಎದೆಗೆ ಬಿಗಿದಪ್ಪಿಕೊಂಡು ಸಂತೈಸಿದರು.
ಪೆನಾಲ್ಟಿ ಶೂಟೌಟ್ನ ನಂತರ ಎಂಬೆಪ್ಪೆ ಅವರ ಬಳಿ ತೆರಳಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸಮಾಧಾನ ಮಾಡುವಾಗ, ಅರ್ಜೆಂಟೀನಾ ಗೋಲ್ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರೂ ತೆರಳಿ ಸಮಾಧಾನ ಮಾಡಿದರು. ಈ ದೃಶ್ಯ ನೋಡಿ ಅಭಿಮಾನಿಗಳೂ ಭಾವುಕರಾದರು.
ಮೂರನೇ ವಿಶ್ವ ಕಿರೀಟ: ಅರ್ಜೆಂಟೀನಾ ತಂಡ 3ನೇ ಬಾರಿ ವಿಶ್ವಕಪ್ ಜಯಿಸಿತು. ಆಡಿದ 6 ಫೈನಲ್ಗಳ ಪೈಕಿ ಅರ್ಜೆಂಟೀನಾ, 1978 ಮತ್ತು 1986ರಲ್ಲೂ ವಿಶ್ವಕಪ್ ಜಯಿಸಿತ್ತು. 1930, 1990, 2014ರಲ್ಲಿ ರನ್ನರ್ಅಪ್ ಆಗಿತ್ತು. 2022ರಲ್ಲಿ ಟ್ರೋಫಿ ಗೆದ್ದಿದೆ.
ಎಂಬಪೆಗೆ ಗೋಲ್ಡನ್ ಬೂಟ್ ಸಮಾಧಾನ: ಟೂರ್ನಿಯಲ್ಲಿ ಒಟ್ಟು 8 ಗೋಲು ಸಿಡಿಸಿದ ಫ್ರಾನ್ಸ್ನ ಕೈಲಿಯಾನ್ ಎಂಬೆಪ್ಪೆ ಅವರಿಗೆ ಗೋಲ್ಡನ್ ಬೂಟ್ ಪ್ರಶಸ್ತಿ ಒಲಿಯಿತು.