ರಾಜ್ಯ ಸರ್ಕಾರದ ಅನ್ಯಾಯಗಳ ವಿರುದ್ಧ ತೀವ್ರ ಹೋರಾಟ

Suvarna Vidhanasoudha
Published on

ಬೆಂಗಳೂರು: ಮುಡಾ ಹಗರಣ ಮುಚ್ಚಿಹಾಕಲು ಉಪ ಚುನಾವಣೆಯಲ್ಲಿ ಮೂರು ಸ್ಥಾನ ಗೆದ್ದ ಸಂಗತಿಯನ್ನು ಶೆಲ್ಟರ್ ತೆಗೆದುಕೊಳ್ಳುವುದು ಬೇಡ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ ಹರಿಹಾಯ್ದರು.

ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ಅಧಿವೇಶನದ ಬಳಿಕ ಈ ವರೆಗೆ ಸಾಕಷ್ಟು ಹಗರಣ ಹೊರಬಂದಿದೆ. ಅದೆಲ್ಲವನ್ನೂ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ರಾಜ್ಯ ಸರ್ಕಾರದ ಅನ್ಯಾಯಗಳ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ವಕ್ಫ್ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆ ಜ್ವಲಂತ ಸಮಸ್ಯೆಯಾಗಿದೆ. ಬಡವರ ಪಡಿತರ ಕಾರ್ಡ್ ರದ್ದು ಮಾಡಿ ಗ್ಯಾರಂಟಿಗಾಗಿ ಹಣ ಉಳಿಸಲಾಗುತ್ತಿದೆ. ಅಬಕಾರಿ ಇಲಾಖೆಯ ಹಗರಣ ನಡೆದಿದೆ, ಬೆಳೆನಾಶಕ್ಕೆ ಪರಿಹಾರ ಮೊದಲಾದ ಸಮಸ್ಯೆಯ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಅಧಿಕಾರಿಗಳಿಗೆ ನೇಣಿನ ಭಾಗ್ಯ ನೀಡಲಾಗಿದೆ. ಅಧಿಕಾರಿಗಳು ಒಂದೋ ವರ್ಗಾವಣೆಯಾಗಬೇಕು ಅಥವಾ ನೇಣು ಹಾಕಿಕೊಳ್ಳಬೇಕು ಎಂಬ ಸ್ಥಿತಿ ಇದೆ. ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿ, ಮಳೆ ಬಂದು ಮುಳುಗುವ ಬೆಂಗಳೂರು ಸೃಷ್ಟಿಯಾಗಿದೆ. ರೌಡಿಗಳನ್ನು ಜೈಲಿಗೆ ಹಾಕುವ ಬದಲು ಪ್ರಕರಣ ಹಿಂಪಡೆಯಲಾಗಿದೆ. ಇದರ ವಿರುದ್ಧವೂ ಮಾತನಾಡಲಾಗುವುದು ಎಂದು ಹೇಳಿದರು.

ಬಿಜೆಪಿ ಒಂದೇ ತಂಡವಾಗಿ ಸರ್ಕಾರದ ವಿರುದ್ಧ ಹೋರಾಡಲಿದೆ. ಬಿಜೆಪಿಯ ಎಲ್ಲ ನಾಯಕರು ಹಾಗೂ ಮುಖಂಡರೊಂದಿಗೆ ಹೋರಾಟ ಮಾಡುವ ಬಗ್ಗೆ ಚರ್ಚಿಸುತ್ತೇನೆ ಎಂದರಲ್ಲದೇ, ನಮ್ಮ ಅವಧಿ ಹಾಗೂ ಈಗಿನ 16 ತಿಂಗಳ ಅವಧಿಯ ಆಡಳಿತದ ಎಲ್ಲವನ್ನೂ ಸಿಬಿಐಗೆ ವಹಿಸಲಿ ನಾವು ತನಿಖೆಗೆ ತಯಾರಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net