ಗುಂಡ್ಲುಪೇಟೆಯಲ್ಲಿ ಉಗ್ರ ಶಿಬಿರ ಯತ್ನ!

gundalpetjan 16
Published on

ಬೆಂಗಳೂರು/ಚಾಮರಾಜನಗರ: ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬೇರೂರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ‘ಅಲ್ ಹಿಂದ್’ ಸಂಘಟನೆ ಆರಂಭಿಸಿದ್ದ ಶಂಕಿತ ಉಗ್ರ ಮೆಹಬೂಬ್ ಪಾಷಾ ಮತ್ತು ಸಹಚರ ಮನ್ಸೂರ್ ಖಾನ್​ನನ್ನು ಬಂಧಿಸುವಲ್ಲಿ ಸಿಸಿಬಿ ತಂಡ ಯಶಸ್ವಿಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಉಗ್ರರ ತರಬೇತಿ ಶಿಬಿರ ತೆರೆಯಲು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಜಮೀನು ಖರೀದಿಗೆ ಪ್ರಯತ್ನಿಸಿದ್ದರೆಂಬ ಸ್ಪೋಟಕ ಮಾಹಿತಿ ಬಂಧಿತರ ವಿಚಾರಣೆ ವೇಳೆ ಬಹಿರಂಗವಾಗಿದೆ.

ಬೆಂಗಳೂರಿನ ಗುರಪ್ಪನಪಾಳ್ಯದ ಮೆಹಬೂಬ್ ಪಾಷಾ, ಜಿಹಾದಿ ಗ್ಯಾಂಗ್​ಗೆ ಬೆಂಗಳೂರಿನ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ. ಮನ್ಸೂರ್ ಖಾನ್ ಈತನ ಸಹಚರನಾಗಿದ್ದ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಈ ಇಬ್ಬರನ್ನು ಸಿಸಿಬಿ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದೆ.

ವೃತ್ತಿಯಲ್ಲಿ ಬಡಗಿಯಾದ ಮೆಹಬೂಬ್ ಪಾಷಾ, ತನ್ನ ಸಹಚರರನ್ನು ಐಸಿಸ್​ಗೆ ಸೇರಿಸುತ್ತಿದ್ದ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟ ದುರುಪಯೋಗಪಡಿಸಿಕೊಂಡು ಮುಸ್ಲಿಂ ಯುವಕರಲ್ಲಿ ಭೀತಿ ಹುಟ್ಟಿಸಿ ಉಗ್ರ ಸಂಘಟನೆಗೆ ಸೆಳೆಯಲು ಯೋಜನೆ ರೂಪಿಸಿದ್ದ. ಇದಕ್ಕೆ ಬಂಧಿತ ಅಲ್ ಉಮ್ಮಾ ಸಂಘಟನೆಯ ಮೊಯಿದ್ದೀನ್ ಕ್ವಾಜಾ ಸಾಥ್ ಕೊಟ್ಟಿದ್ದ. ಮೊದಲ ಹಂತದಲ್ಲಿ ಸಂಘಟನೆಗೆ ಸದಸ್ಯರ ನೇಮಕಾತಿ, ಶಸ್ತ್ರಾಸ್ತ್ರಗಳ ತರಬೇತಿಗೆ ಪಾಷಾ ನೀಲನಕ್ಷೆ ಸಿದ್ಧಪಡಿಸಿದ್ದ. ಪಿಸ್ತೂಲ್ ಮತ್ತು ಸ್ಪೋಟಕ ತಯಾರಿಕಾ ಸಾಮಗ್ರಿಗಳ ಸಂಗ್ರಹ ನಡೆಸಿದ್ದ. ಮನ್ಸೂರ್ ಖಾನ್ ಖಾಸಗಿ ಶಾಲಾ ವಾಹನ ಚಾಲಕನಾಗಿದ್ದ. ಪಾಷಾನ ಬಲಗೈ ಬಂಟನಾದ ಈತ ಐಸಿಸ್ ಬಲಪಡಿಸಲು ಜಿಹಾದಿ ಗ್ಯಾಂಗ್​ಗೆ ಒಲವು ಹೊಂದಿದ್ದ ಯುವಕನ್ನು ಕರೆತರುತ್ತಿದ್ದ.

ತನ್ನ ತಮ್ಮ ಮೊಹಮ್ಮದ್ ಹನೀಫ್​ನನ್ನು ಸಂಘಟ ನೆಗೆ ಸೇರಿಸಿದ್ದು, ತಮಿಳುನಾಡು ಕ್ಯೂ ಸ್ಕಾ್ವಡ್ ವಶದಲ್ಲಿದ್ದಾನೆ ಎಂದು ಪೊಲೀಸ್ ಮೂಲ ಗಳು ತಿಳಿಸಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಜಮೀನು ಖರೀದಿಗೆ ಮೆಹಬೂಬ್ ಪಾಷಾ ಮನ್ಸೂರ್ ಖಾನ್​ನನ್ನು ಮುಂದೆ ಬಿಟ್ಟಿದ್ದ. ಅಲ್ ಹಿಂದ್ ಹೆಸರಿನಲ್ಲಿ ಭೂಮಿ ಖರೀದಿಸಲು ಗುಂಡ್ಲುಪೇಟೆ ಮೌಲ್ವಿ ಮತ್ತು ಏಜೆಂಟ್​ನನ್ನು ಸಂರ್ಪಸಿದ್ದರು. ಈ ಇಬ್ಬರನ್ನೂ ಸಿಸಿಬಿ ವಿಚಾರಣೆ ನಡೆಸಿದೆ ಎಂದು ಚಾಮರಾಜನಗರ ಎಸ್​ಪಿ ಆನಂದ್​ಕುಮಾರ್ ಖಚಿತಪಡಿಸಿದ್ದಾರೆ.

ಗುಂಡ್ಲುಪೇಟೆಯೇ ಏಕೆ?: ಗುಂಡ್ಲುಪೇಟೆ ತಾಲೂಕಿನ ಬಹುಭಾಗ ಅರಣ್ಯದಿಂದ ಕೂಡಿದೆ. ಕೇರಳದ ವೈನಾಡು, ತಮಿಳುನಾಡಿನ ಮಧುಮಲೈ, ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಉಗ್ರರು ಅಡಗುತಾಣಕ್ಕೆ ಸ್ಕೆಚ್ ಹಾಕಿದ್ದಾರೆ. ಗುಂಡ್ಲುಪೇಟೆ ಗಡಿಯಲ್ಲಿ ಅನೇಕ ಫಾಮ್ರ್ ಹೌಸ್​ಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಇದನ್ನು ತಿಳಿದ ಶಂಕಿತ ಉಗ್ರರು ಟ್ರೇನಿಂಗ್ ಕ್ಯಾಂಪ್ ತೆರೆಯಲು ನಿರ್ಧರಿಸಿದ್ದರು. ಅಲ್ಲದೆ ನಕ್ಸಲರ ಮೇಲೆ ನಿಗಾವಹಿಸುವ ಪೊಲೀಸರಿಂದ ಉಗ್ರ ಚಟುವಟಿಕೆಗಳತ್ತ ಗಮನ ಹರಿಸಲು ಅಸಾಧ್ಯ ಎಂಬ ಲೆಕ್ಕಾಚಾರ. ಹಾಗಾಗಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡುವಂತೆ ಆನಂದ್​ಕುಮಾರ್ ಮನವಿ ಮಾಡಿದ್ದಾರೆ.

ಉಗ್ರರ ಪಟ್ಟಿಯಲ್ಲಿ ಭಟ್ಕಳ ವ್ಯಕ್ತಿ: ಉಗ್ರರ ನೆಲೆಯ ಕಳಂಕದಿಂದ ಭಟ್ಕಳ ಹೊರಬರಲು ಯತ್ನಿಸುತ್ತಿರುವ ಬೆನ್ನಲ್ಲೇ ದೇಶದ 9 ಉಗ್ರರಲ್ಲಿ ಭಟ್ಕಳ ಮೂಲದ ಅಫಿಫ್ ಜೈಲಾನಿಯ ಹೆಸರು ಸೇರಿದೆ. ಬಿಇ ಮುಗಿಸಿ ಸೌದಿಗೆ ತೆರಳಿದ ಜೈಲಾನಿ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಜತೆ ನಂಟು ಹೊಂದಿದ್ದ. ಶಂಕಿತ ಉಗ್ರರಾದ ತೌಕೀರ್ ಅಬ್ದುಲ್ ಸುಭಾನ್, ರಿಯಾಜ್ ಇಕ್ಬಾಲ್, ಅಹ್ಮದ್, ಸುಲ್ತಾನ್, ಶಾದೀನ್ ಸೇರಿ ಇತರ ಜತೆ ಸೇರಿ ದೇಶದ ಹಲವೆಡೆ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ ಎನ್ನಲಾಗಿದೆ.

ಟ್ರಸ್ಟ್ ಹೆಸರಿನಲ್ಲಿ ಐಸಿಸ್ ಸಂಘಟನೆ?

ಕೋಲಾರದ ಸಲೀಂ ಮೂಲಕ ತಮಿಳುನಾಡಿನ ಮೊಯಿದ್ದೀನ್ ಕ್ವಾಜಾನನ್ನು ಪರಿಚಯ ಮಾಡಿ ಕೊಂಡಿದ್ದ ಮೆಹಬೂಬ್ ಪಾಷಾ, ಗುರಪ್ಪನಪಾಳ್ಯದ ತನ್ನ ಮನೆ ಯನ್ನೇ ತಾತ್ಕಾಲಿಕ ಕಾರ್ಯಸ್ಥಾನ ಮಾಡಿಕೊಂಡಿದ್ದ. ಐಸಿಸ್ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿಗಾಗಿ ಅಲ್ ಹಿಂದ್ ಎಂಬ ಟ್ರಸ್ಟ್ ಆರಂಭಿಸಿದ್ದ. ಧಾರ್ವಿುಕ ಬೋಧನೆ ಮತ್ತು ಸಾಮಾಜಿಕ ಕಾರ್ಯಗಳನ್ನು ಆಯೋಜಿಸಿ ಯುವ ಸಮೂಹವನ್ನು ಸೆಳೆಯಲು ಪಾಷಾ ಮುಂದಾಗಿದ್ದ. ಚಾಲಕರಾದ ಮನ್ಸೂರ್ ಖಾನ್, ನಾಯಂಡಹಳ್ಳಿಯ ಇಮ್ರಾನ್ ಖಾನ್, ಗುರಪ್ಪನಪಾಳ್ಯದ ಮೊಹಮ್ಮದ್ ಹನೀಫ್, ಹುಸೇನ್, ಚನ್ನಪಟ್ಟಣದ ಅನೀಸ್, ರಾಮನಗರದ ಅಜರ್ ಪಾಷ, ಜಬೀವುಲ್ಲಾ ಮತ್ತು ಮುಸಾವೀರ್ ಹುಸೈನ್​ರನ್ನು ಸಂಘಟನೆಗೆ ಮೆಹಬೂಬ್ ನೇಮಿಸಿ ಕೊಂಡಿದ್ದ. ಕ್ವಾಜಾ ಸೂಚನೆ ಮೇರೆಗೆ ತಮಿಳುನಾಡಿನ ಅಬ್ದುಲ್ ಸಮದ್, ತೌಸಿಫ್, ಸೈಯದ್ ಅಲಿ ನವಾಜ್, ಜಾಫರ್ ಅಲಿ, ಅಬ್ದುಲ್ ಶಮೀಮ್ ಜತೆ ಪಾಷಾ ಸಂಪರ್ಕ ಬೆಳೆಸಿದ್ದ.

ಪೊಲೀಸರ ವಶಕ್ಕೆ

ಜ.14ರಂದು ಉಡುಪಿ ರೈಲು ನಿಲ್ದಾಣದಲ್ಲಿ ಸಿಸಿಬಿಗೆ ಸೆರೆಸಿಕ್ಕಿದ್ದ ಅಬ್ದುಲ್ ಶಮೀಮ್ ಮತ್ತು ತೌಸೀಫ್​ನನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಎಸ್​ಐ ವಿಲ್ಸನ್ ಕೊಲೆ ಕೇಸಿನಲ್ಲಿ ಈ ಇಬ್ಬರ ಪಾತ್ರವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net