ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉತ್ಸವಗಳು

-6797bfe446fcf
Published on

| ಪ್ರಶಾಂತ ರಿಪ್ಪನ್​ಪೇಟೆ

ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ವಿುಕ ಉತ್ಸವಗಳು ಸಮಾಜದಲ್ಲಿ ಸಾಮರಸ್ಯವನ್ನು ಗಟ್ಟಿಗೊಳಿಸುವ ಸದುದ್ದೇಶ ಹೊಂದಿವೆ. ಜಾತಿ, ಮತ, ಭಾಷೆ, ಪ್ರಾಂತ್ಯದ ಭೇದವನ್ನು ಮರೆತು ಜನ ಸಮ್ಮಿಳಿತಗೊಳ್ಳುವ ಜಾತ್ರೆ, ರಥೋತ್ಸವಗಳಲ್ಲಿ ಭಕ್ತಿಭಾವದ ಜತೆ ಅರಿವು ದೊರೆಯುತ್ತದೆ. ಉತ್ತರಾಯಣ ಆರಂಭವಾಗುತ್ತಿದ್ದಂತೆ ನಾಡಿನಲ್ಲಿ ಸಾಲು ಸಾಲು ಜಾತ್ರೆಗಳು ಆರಂಭವಾಗುತ್ತವೆ. ಧಾರ್ವಿುಕತೆಯ ಜತೆಗೆ ಕೃಷಿ, ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಯ ಅನಾವರಣವಾಗುತ್ತದೆ. ಜಾತ್ರೆ, ಉತ್ಸವಗಳು ಸಾಂಸ್ಕೃತಿಕ ಏಕತೆ ಹಾಗೂ ಸಾಮಾಜಿಕ ಜಾಗೃತಿಗೆ ನಾಂದಿಯಾಗುತ್ತವೆೆ. ಈ ಹಿನ್ನೆಲೆಯಲ್ಲಿ ಸುತ್ತೂರು, ಯಡೂರ, ನಾಲವಾರ, ಬಳಗಾನೂರಿನಲ್ಲಿ ನಡೆಯಲಿರುವ ಜಾತ್ರೆಗಳು ಭಕ್ತರ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ.

ಹತ್ತು ಹಲವು ವಿಶೇಷತೆಯ ಸುತ್ತೂರು ಜಾತ್ರೆ: 10ನೇ ಶತಮಾನದಲ್ಲಿ ಶ್ರೀಜಗದ್ಗುರು ಶಿವರಾತ್ರೀಶ್ವರರು ಕಪಿಲಾನದಿಯ ತೀರದಲ್ಲಿ ಸ್ಥಾಪಿಸಿರುವ ಸುತ್ತೂರು ಮಠದಲ್ಲಿ ಇಲ್ಲಿಯವರೆಗೆ 23 ಜಗದ್ಗುರುಗಳು ಆಗಿ ಹೋಗಿದ್ದು, ಪ್ರಸ್ತುತ ಇರುವ 24ನೇ ಜಗದ್ಗುರು ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಮಠದ ಜಾತ್ರೆ ಹತ್ತು ಹಲವು ವಿಶೇಷತೆಗಳನ್ನು ಹೊತ್ತು ತಂದಿದೆ. ಸುತ್ತೂರು ಜಾತ್ರೆಯ ವ್ಯಾಖ್ಯಾನ ಬದಲಿಸಿದ ಕೀರ್ತಿ ಲಿಂಗೈಕ್ಯ ಜಗದ್ಗುರು ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ.

ಪುಷ್ಯಮಾಸದ ಬಹುಳ ಜ.26ಕ್ಕೆ ಜಾತ್ರೆ ಆರಂಭವಾಗಿದ್ದು, ಜ.31ರವರೆಗೆ ನಡೆಯಲಿದೆ. ಇಂದು ವಿಶೇಷ ಶ್ರೀಶಿವರಾತ್ರೀಶ್ವರರ ಮಹಾರಥೋತ್ಸವ ನಡೆಯಲಿದೆ. ಜನಪದ ಕಲಾ ಮೇಳ, ಕ್ರೀಡಾ ಸ್ಪರ್ಧೆ, ಕೃಷಿಮೇಳ, ಸಾಮೂಹಿಕ ವಿವಾಹ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಅನಾವರಣಕ್ಕೆ ಜಾತ್ರೆಯು ವೇದಿಕೆಯಾಗಲಿದೆ.

ನಾಲವಾರದ ಕೋರಿಸಿದ್ದೇಶ್ವರ ಜಾತ್ರೆ: ಕಾಖಂಡಕಿ ಮಲ್ಲಾರಾಧ್ಯರ ಶಿಷ್ಯರಾದ ಶ್ರೀಸಿದ್ದೇಶ್ವರರು ತುಂಬಿ ಹರಿಯುವ ಭೀಮಾನದಿಯನ್ನು ಕೋರಿ (ಕಂಬಳಿ) ಮೇಲೆ ಕುಳಿತು ದಾಟಿದ್ದರಿಂದ ಕೋರಿಸಿದ್ದೇಶ್ವರ ಎಂದು ಪ್ರಸಿದ್ಧರಾಗಿದ್ದಾರೆ. ಭಕ್ತರ ಕೋರಿಕೆಯಂತೆ ಪ್ರಸ್ತುತ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮಿಗಳು ಸಾಮಾಜಿಕ ವಾಗಿ, ಸಾಹಿತ್ಯಿಕವಾಗಿ ಶ್ರೀಮಠದ ಕೀರ್ತಿಯನ್ನು ವಿಸ್ತರಿಸಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಶ್ರೀಕೋರಿಸಿದ್ದೇಶ್ವರ ರಥೋತ್ಸವವು ಪ್ರಮುಖ ವಾಗಿದ್ದು, ಪ್ರತಿ ಪುಷ್ಯಮಾಸದ ಅವರಾತ್ರಿ ಅಮಾವಾಸ್ಯೆ ಯಂದು ವಿಜೃಂಭಣೆಯಿಂದ ನಡೆಯುತ್ತದೆ. ನಾಳೆ ಅಪರೂಪದ ತನಾರತಿ ಉತ್ಸವ ಹಾಗೂ ಜ.30ಕ್ಕೆ ಬೃಹತ್ ರಥೋತ್ಸವ ನಡೆಯಲಿದೆ.

ಬಳಗಾನೂರಿನಲ್ಲಿ ರಥಸಪ್ತಮಿಯಂದು ರಥೋತ್ಸವ: ಕೊಪ್ಪಳ ಜಿಲ್ಲೆಯ ಚಿಕ್ಕೇನುಕೊಪ್ಪದ ಶ್ರೀಚನ್ನವೀರ ಶರಣರು ತ್ರಿಕಾಲ ಜ್ಞಾನಿಗಳು. ಲೋಕಸಂಚಾರ ಮಾಡುತ್ತಾ ಗದಗ ಜಿಲ್ಲೆಯ ಬಳಗಾನೂರಿಗೆ ಬಂದ ಶರಣರು ಅಲ್ಲಿಯೇ ನೆಲೆಸಿ ಮಠ ನಿರ್ವಿುಸಿ ಲಿಂಗಕ್ಯರಾಗಿದ್ದಾರೆ. ಅವರ ತರುವಾಯ ಶ್ರೀಶಿವಶಾಂತವೀರ ಸ್ವಾಮಿಗಳು ಬಳಗಾನೂರು ಕ್ಷೇತ್ರವನ್ನು ಧಾರ್ವಿುಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಿದ್ದಾರೆ. ಶರಣರು ಲಿಂಗೈಕ್ಯರಾದ ಮಾಘ ಶುದ್ಧ ರಥಸಪ್ತಮಿ ಯಂದು ರಥೋತ್ಸವ ನಡೆಯುತ್ತದೆ.

ಇಂದಿನಿಂದ (ಮಂಗಳವಾರ) ಮಹಾತ್ಮರ ಜೀವನ ಸಾಧನೆ ಕುರಿತ ಪ್ರವಚನ ಆರಂಭವಾಗಲಿದ್ದು, ಫೆ.4ರಂದು ರಥೋತ್ಸವ ನಡೆಯಲಿದೆ. ಮುತೆôದೆಯರಿಗೆ ಉಡಿ ತುಂಬುವುದು, ಸಾಮೂಹಿಕ ವಿವಾಹ, ತುಲಾಭಾರ, ಶರಣಶ್ರೀ ಪ್ರಶಸ್ತಿ ಪ್ರದಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ಕಿತ್ತೂರು ಕರ್ನಾಟಕದ ಯಡೂರ ಜಾತ್ರೆ

ಕಿತ್ತೂರು ಕರ್ನಾಟಕದ ಗಡಿಭಾಗದಲ್ಲಿರುವ ಚಿಕ್ಕೋಡಿ ತಾಲೂಕಿನ ಯಡೂರ ಶ್ರೀವೀರಭದ್ರೇಶ್ವರ ಕ್ಷೇತ್ರವು ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ಲುಪ್ತವಾಗಿದ್ದ ವೀರಭದ್ರ ಕ್ಷೇತ್ರವನ್ನು ಮಹಾತಪಸ್ವಿ ಕಾಡಸಿದ್ದೇಶ್ವರರು ತಮ್ಮ ತಪೋಬಲದಿಂದ ಬೆಳಕಿಗೆ ತಂದಿದ್ದಾರೆ.

11ನೇ ಶತಮಾನದಲ್ಲಿ ಈ ಪ್ರಾಂತ್ಯವನ್ನಾಳುತ್ತಿದ್ದ ಸಿಂಗಣದೇವನೆಂಬ ರಜಪೂತ ದೊರೆ ದೇವಾಲಯವನ್ನು ಜೀಣೋದ್ಧಾರ ಮಾಡಿದ ಉಲ್ಲೇಖವಿದೆ. ಕಾಡದೇವರ ಮಠದ ಅಧಿಪತಿಗಳಾಗಿರುವ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ವಾರ್ಷಿಕ ಜಾತ್ರೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಯಲ್ಲಿರುವ ಯಡೂರ ಕ್ಷೇತ್ರ ಸಾಮರಸ್ಯದ ಪ್ರಮುಖ ಕೊಂಡಿಯಾಗಿದೆ. ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇಂದಿನಿಂದ (ಮಂಗಳವಾರ) ಜ.30 ರವರೆಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರಸ್ವಾಮಿಗೆ ಬಿಲ್ವಾರ್ಚನೆ, ಧರ್ಮಜಾಗೃತಿ ಸಮಾರಂಭ, ಆರೋಗ್ಯ ತಪಾಸಣಾ ಶಿಬಿರ, ನಗೆಹಬ್ಬ, ಸಂಗೀತ ಕಾರ್ಯಕ್ರಮ, ಅಯ್ಯಾಚಾರ ದೀಕ್ಷೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿಶೇಷವಾಗಿ ಜ.30ರಂದು ಮಹಾರಥೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net