

ಮುಂಬೈ: ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಷೇರುಗಳು ಅಧಿಕ ಲಾಭ ಗಳಿಸಿದ ಲವಾಗಿ ಮಂಗಳವಾರ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡ 2.5ರಷ್ಟು ಚೇತರಿಕೆ ದಾಖಲಿಸಿವೆ. ಇದರಿಂದ ಹೂಡಿಕೆದಾರರ ಸಂಪತ್ತು 5.68 ಲಕ್ಷ ಕೋಟಿ ರೂ. ಹಿಗ್ಗಿದೆ. ಸುಮಾರು ಮೂರು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಒಂದೇ ದಿನದ ಅತ್ಯಧಿಕ ಗಳಿಕೆ ಇದಾಗಿದೆ. ಬ್ಯಾಂಕಿಂಗ್ ಮತ್ತು ಐಟಿ ಮಾತ್ರವಲ್ಲದೆ ತೈಲ ಕ್ಷೇತ್ರದ ಸ್ಟಾಕ್ಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದೂ ಚೇತರಿಕೆಗೆ ಕಾರಣವಾಗಿದೆ. 30 ಷೇರುಗಳ ಸೆನ್ಸೆಕ್ಸ್ 1,564.45 (2.70%) ಹೆಚ್ಚಳವಾಗಿ 59,537.07 ಪಾಯಿಂಟ್ನಲ್ಲಿ ನಿಂತಿತು. ಎನ್ಎಸ್ಇ ನಿಫ್ಟಿ 446.40 (2.58%) ಪಾಯಿಂಟ್ ಗಳಿಕೆಯೊಂದಿಗೆ ದಿನದಂತ್ಯಕ್ಕೆ 17,759.30ರಲ್ಲಿ ಕೊನೆಗೊಂಡಿತು. ಷೇರುಪೇಟೆಯಲ್ಲಿನ ಈ ಚೇತರಿಕೆ ದೇಶದ ಆರ್ಥಿಕತೆಯ ಸುಧಾರಣೆಯ ದ್ಯೋತಕವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ರೂಪಾಯಿ ಚೇತರಿಕೆ: ರೂಪಾಯಿ ಮೌಲ್ಯ ಮಂಗಳವಾರ 47 ಪೈಸೆ ಏರಿಕೆಯಾಗಿ ಡಾಲರ್ ಎದುರು ಅದರ ಮೌಲ್ಯ 79.44 ರೂ. ಆಗಿದೆ.
400 ಕೋಟಿ ದಾಟಿದ ವೀಸಾ ಟೋಕನ್
ಪಾವತಿ ದಿಗ್ಗಜ ಕಂಪನಿ ವೀಸಾ, ಇದುವರೆಗೆ 400 ಕೋಟಿ ಟೋಕನ್ಗಳನ್ನು ಮಂಜೂರು ಮಾಡಿದೆ. ಇದು ಬೌತಿಕ ಕಾರ್ಡ್ಗಳ ಸಂಖ್ಯೆಯನ್ನೂ ಮೀರಿಸಿದೆ. 2014ರಲ್ಲಿ ವೀಸಾ ಟೋಕನ್ ವ್ಯವಸ್ಥೆ (ವಿಟಿಎಸ್) ಜಾರಿಗೊಳಿಸಿದ್ದು, 2020ರ ಹೊತ್ತಿಗೆ 100 ಕೋಟಿ ಟೋಕನ್ ಮಂಜೂರು ಮಾಡಿದೆ. 2021ರಲ್ಲಿ 200 ಕೋಟಿ ಕಾರ್ಡ್ ಮಂಜೂರಾಗಿದ್ದು ಈ ವರ್ಷ ದುಪ್ಪಟ್ಟುಗೊಂಡು 400 ಕೋಟಿ ಆಗಿದೆ.ಚಲಾವಣೆಯಲ್ಲಿರುವ ಭೌತಿಕ ಕಾರ್ಡ್ ಗಳಿಗಿಂತ ಟೋಕನ್ ಸಂಖ್ಯೆ ಜಾಸ್ತಿಯಿದೆ ಎಂದು ವೀಸಾ ಇನ್ಕಾರ್ಪೊರೇಷನ್ ತಿಳಿಸಿದೆ. ಟೋಕನ್ ವ್ಯವಸ್ಥೆಯಲ್ಲಿ 16&ಅಂಕಿಯ ಖಾತೆ ಸಂಖ್ಯೆಯನ್ನು ಟೋಕನ್ ಮೂಲಕ ಬದಲಾಯಿಸಲಾಗುತ್ತದೆ. ಅದನ್ನು ವೀಸಾ ಮೂಲಕ ಮಾತ್ರವೇ ಅನ್ಲಾಕ್ ಮಾಡಬಹುದು. ಮಾಹಿತಿಯನ್ನು ಮರೆಮಾಚುವ ಮೂಲಕ ಟೋಕನ್ ವ್ಯವಸ್ಥೆಯು ವಂಚಕರಿಂದ ರಕ್ಷಣೆ ಒದಗಿಸುತ್ತದೆ.
ಕರೊನಾ ಸಾಂಕ್ರಾಮಿಕತೆಯಿಂದಾಗಿ ಇ-ವಾಣಿಜ್ಯದ ಪ್ರಮಾಣದಲ್ಲಿ ಶೇಕಡ 50ಕ್ಕಿಂತ ಹೆಚ್ಚಳವಾಗಿದೆ. ಆನ್ಲೈನ್ ಶಾಪಿಂಗ್ನಲ್ಲಿ ಅಗಾಧ ಏರಿಕೆಯಾದ್ದರಿಂದ ಸರಳ ಹಾಗೂ ಸುರತ ವ್ಯವಹಾರ ವಿಧಾನಗಳಿಗೆ ಬೇಡಿಕೆಯೂ ಹೆಚ್ಚಾಯಿತು. ವೀಸಾ ಟೋಕನ್ನಿಂದಾಗಿ ವಂಚನೆ ಪ್ರಮಾಣದಲ್ಲಿ ಶೇ. 28 ಇಳಿಕೆ ಆಗಿದೆ.