

ಹೊಳೆಹೊನ್ನೂರು: ಸಮೀಪದ ಮೈದೊಳಲಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಮೊಹರಂ ಹಬ್ಬವನ್ನು ಆಚರಿಸಿದರು. ಶನಿವಾರ ಸಂಜೆ ಗ್ರಾಮದ ರಾಜಭಕ್ಷವಾಲಿ ಸುನ್ನಿ ಮಕಾನ್ ಮುಂಭಾಗ ಕಟ್ಟಿಗೆ ರಾಶಿ ಹಾಕಿದ್ದರು. ವಿವಿಧ ಸಿಹಿ ಖಾದ್ಯಗಳನ್ನು ನೈವೇದ್ಯ, ಕಾಣಿಕೆಗಳನ್ನು ಸಮರ್ಪಿಸಿದರು. ತಡ ರಾತ್ರಿ ಕಟ್ಟಿಗೆಗೆ ಬೆಂಕಿ ನೀಡಿದ ಗ್ರಾಮಸ್ಥರು ಬೆಳಗಿನವರೆಗೂ ಭಜನೆ ಮಾಡಿದರು. ಭಾನುವಾರ ನಸುಕಿನಲ್ಲಿ ಎಲ್ಲರೂ ಕೆಂಡಹಾಯ್ದು ಭಕ್ತಿ ಸಮರ್ಪಿಸಿದರು. ಬಳಿಕ ನಡೆದ ಮೆರವಣಿಗೆಯಲ್ಲಿ ಪಂಜಾ ಹಾಗೂ ಪಲ್ಲಕ್ಕಿ ಹೊತ್ತು ಸಾಗಿದರು. ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದ ಮೆರವಣಿಗೆಯಲ್ಲಿ ಮಕ್ಕಳು ವಿವಿಧ ವೇಷ ತೊಟ್ಟು ರಂಜಿಸಿದರು. ಪೋಷಾಕು ತೊಟ್ಟವರಿಗೆ ಪ್ರಸಾದದ ರೂಪವಾಗಿ ಒಣ ಕೊಬ್ಬರಿ ನೀಡಲಾಯಿತು. ಹರಕೆ ಹೊತ್ತವರು ಮೆಣಸಿನಕಾಳು ಹಾಗೂ ಮಂಡಕ್ಕಿ ಎರಚಿದರು. ಗ್ರಾಮದ ಏಳುಹಳ್ಳದ ನಾಲೆಯಲ್ಲಿ ದೇವರನ್ನು ವಿಸರ್ಜಿಸುವ ಮೂಲಕ ಹಬ್ಬಕ್ಕೆ ತೆರೆಬಿದ್ದಿತು.