ಫೆಂಗಲ್​ ಪ್ರಹಾರ: ಯಾವ ರಾಜ್ಯಗಳಿಗೆ ಚಂಡಮಾರುತದ ಅಬ್ಬರ? ಹೀಗಿದೆ ಐಎಂಡಿ ವರದಿ

ವಿಜಯವಾಣಿ - 2024-11-29T100339.526
Published on

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಮುಂದಿನ ಎರಡು ಮೂರು ದಿನಗಳು ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ತಮಿಳುನಾಡು ಮತ್ತು ಪುದುಚೇರಿಯ ಕೆಲವು ಭಾಗಗಳಲ್ಲಿ ಬಿರುಸಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆ ತಮಿಳುನಾಡು ಮತ್ತು ಪುದುಚೇರಿಯ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಇಂದು ಚೆನ್ನೈ, ಚೆಂಗಲ್ಪಟ್ಟು ಮತ್ತು ಕಡಲೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆಯಿದ್ದರೆ, ಪುದುಚೇರಿಯಲ್ಲಿ ಶುಕ್ರವಾರ ಮತ್ತು ಶನಿವಾರದಂದು ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಫೆಂಗಲ್ ಚಂಡಮಾರುತವು, ಉತ್ತರ ಈಶಾನ್ಯಕ್ಕೆ ಚಲಿಸುತ್ತಿದ್ದು, ಚಳಿ, ಗಾಳಿ ಮತ್ತು ನಿರಂತರ ಮಳೆಗೆ ಕಾರಣವಾಗಲಿದೆ ಎಂದು ವರದಿಯಾಗಿದೆ.

"ಭಾರತೀಯ ಕಾಲಮಾನದ ಪ್ರಕಾರ, ಇದು ನಿನ್ನೆ 2330 ಗಂಟೆಗಳಲ್ಲಿ ಈಶಾನ್ಯಕ್ಕೆ 240 ಕಿಲೋಮೀಟರ್, ನಾಗಪಟ್ಟಣಂನ ಪೂರ್ವ-ಆಗ್ನೇಯಕ್ಕೆ 330 ಕಿಲೋಮೀಟರ್, ಪುದುಚೇರಿಯ ಪೂರ್ವ-ಆಗ್ನೇಯಕ್ಕೆ 390 ಕಿಲೋಮೀಟರ್ ಮತ್ತು ಚೆನ್ನೈನಿಂದ 430 ಕಿಲೋಮೀಟರ್ ಆಗ್ನೇಯಕ್ಕೆ ಕೇಂದ್ರೀಕೃತವಾಗಿತ್ತು" ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಫೆಂಗಲ್​ ಚಂಡಮಾರುತ ಶನಿವಾರ ಬೆಳಗ್ಗೆ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿ, ಕಾರೈಕಾಲ್ ಮತ್ತು ಮಹಾಬಲಿಪುರಂ ನಡುವೆ ಪುದುಚೇರಿಗೆ ಸಮೀಪದಲ್ಲಿ ದಾಟುವ ಸಾಧ್ಯತೆಯಿದೆ. ಇದು 45-55 ಕಿಮೀ ವೇಗದಲ್ಲಿ ಗಂಟೆಗೆ 65 ಕಿಮೀ ವೇಗದಲ್ಲಿ ಬೀಸುತ್ತದೆ ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಾಕ್ಷಿಯಾಗಿರುವ ತಮಿಳುನಾಡು ಮತ್ತು ಪುದುಚೇರಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯನ್ನು ನೋಡಲಿದೆ ಎನ್ನಲಾಗಿದೆ.

ಇಂದು ಮತ್ತು ನಾಳೆ (ನ.30) ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ತಿರುವರೂರ್, ನಾಗಪಟ್ಟಣಂ, ತಿರುವಳ್ಳೂರು, ಕಾಂಚೀಪುರಂ, ಅರಿಯಲೂರು ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net