ಮತ್ತೆ ಪದಕ ಗೆದ್ದಂತಾಯ್ತು; ಹಾಕಿ ದಂತಕಥೆ ಸೋಮಯ್ಯ ಅವರ ಒಲಿಂಪಿಕ್ಸ್ ಚಿನ್ನದ ಪದಕ ವಾಪಸ್, ಇಬ್ಬರ ಬಂಧನ..MM Somaya

ಮತ್ತೆ ಪದಕ ಗೆದ್ದಂತಾಯ್ತು; ಹಾಕಿ ದಂತಕಥೆ ಸೋಮಯ್ಯ ಅವರ ಒಲಿಂಪಿಕ್ಸ್ ಚಿನ್ನದ ಪದಕ ವಾಪಸ್, ಇಬ್ಬರ ಬಂಧನ..MM Somaya
Published on: 
  • ಎಂ.ಎಂ. ಸೋಮಯ್ಯ ಅವರ ಬೆಂಗಳೂರು ನಿವಾಸದಲ್ಲಿ ಕಳ್ಳತನ.

  • ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕ ಕದ್ದಿದ್ದ ಕಳ್ಳರು.

  • ರಾಮನಗರದಲ್ಲಿ ಇಬ್ಬರ ಬಂಧನ, ಪದಕ ವಾಪಸ್.

ಬೆಂಗಳೂರು: 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ಇತಿಹಾಸ ಸೃಷ್ಟಿಸಿದ್ದ ಹಾಕಿ ದಂತಕಥೆ ಎಂ.ಎಂ. ಸೋಮಯ್ಯ ಅವರು ಹುಟ್ಟೂರಿಗೆ ತೆರಳಿದ್ದಾಗ, ಬೆಂಗಳೂರಿನ ನಿವಾಸದಲ್ಲಿ ಐತಿಹಾಸಿಕ ಪದಕಗಳು, ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿತ್ತು. ಸದ್ಯ ಪ್ರಕರಣ ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿ, ಕಳೆದುಕೊಂಡ ಪದಕಗಳನ್ನು ವಾಪಸ್ ಕೊಡಿಸಿದ್ದಾರೆ.

ಬಂಧಿತರು ಇಟ್ಟಮಡು ಮೂಲೆಯ ಮಾಣಿಕ್ಯ ಅಲಿಯಾಸ್ ಮಣಿಕಂಟ (31) ಮತ್ತು ಬನಶಂಕರಿಯ ಭರತ್ ಅಲಿಯಾಸ್ ಡಾರ್ಲಿ (25). ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ.

ಏನಾಗಿತ್ತು?

ಅಕ್ಟೋಬರ್ 25ರಂದು ಸಂಜೆ 5 ಗಂಟೆಗೆ ಸೋಮಯ್ಯ ಅವರು ಕುಟುಂಬ ಸಮೇತರಾಗಿ ಹುಟ್ಟೂರಾದ ಕೊಡಗಿಗೆ ತೆರಳಿದ್ದರು. ಅವರು ಇಲ್ಲದ ಸಮಯವನ್ನೇ ಗುರಿ ಮಾಡಿಕೊಂಡ ಕಳ್ಳರು, ಅಕ್ಟೋಬರ್ 28ರಂದು ಬೆಂಗಳೂರಿನ HAL 3ನೇ ಹಂತದಲ್ಲಿರುವ ಅವರ ನಿವಾಸಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರಾದ ನಾರಾಯಣ ಅವರು ಸೋಮಯ್ಯ ಅವರಿಗೆ ಮಾಹಿತಿ ನೀಡಿದ್ದರು.ವಿಷಯ ಗೊತ್ತಾಗುತ್ತಿದ್ದಂತೆ ಅ.28ರಂದೇ ಸೋಮಯ್ಯ ಬೆಂಗಳೂರಿಗೆ ಆಗಮಿಸಿ ಮನೆಯನ್ನು ಪರಿಶೀಲಿಸಿ, ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಏನೆಲ್ಲ ಕಳ್ಳತನವಾಗಿತ್ತು?

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಗೆದ್ದಿದ್ದ ಚಿನ್ನದ ಪದಕ, 1982ರ ದೆಹಲಿ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ, 1986ರ ಸಿಯೋಲ್ ಏಷ್ಯನ್ ಗೇಮ್ಸ್ ಕಂಚಿನ ಪದಕ ಮತ್ತು 1982ರ ಆಮ್ಸ್ಟರ್‌ಡ್ಯಾಮ್ ಚಾಂಪಿಯನ್ಸ್ ಟ್ರೋಫಿ ಕಂಚಿನ ಪದಕಗಳು ಕಳ್ಳತನವಾಗಿದ್ದವು. ಇದರೊಂದಿಗೆ 3.5 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು ಮತ್ತು 30 ಸಾವಿರ ರೂ. ನಗದು ಕೂಡ ಕದ್ದಿದ್ದರು.

Also Read
E20 ಅಲ್ಲ 420 ಇದು: ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಕಳ್ಳತನ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆರೋಪ| Rahul Gandhi
ಮತ್ತೆ ಪದಕ ಗೆದ್ದಂತಾಯ್ತು; ಹಾಕಿ ದಂತಕಥೆ ಸೋಮಯ್ಯ ಅವರ ಒಲಿಂಪಿಕ್ಸ್ ಚಿನ್ನದ ಪದಕ ವಾಪಸ್, ಇಬ್ಬರ ಬಂಧನ..MM Somaya

ರಾಮನಗರದಲ್ಲಿ ಆರೋಪಿಗಳು ಪತ್ತೆ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಯ ಸಿಸಿಟಿವಿ ಹಾಗೂ ಸೋಮಯ್ಯ ಅವರ ನಿವಾಸಕ್ಕೆ ಕನೆಕ್ಟ್ ಆಗುವ ಎಲ್ಲ ಸ್ಥಳವನ್ನು ಪರಿಶೀಲಿಸಿ, ನ.9ರಂದು ರಾಮನಗರ ಜಿಲ್ಲೆಯ ಹಗಲಹಳ್ಳ ಕ್ರಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಣಿಕ್ಯನ ವಿರುದ್ಧ ಕರ್ನಾಟಕದಲ್ಲಿ 25, ತಮಿಳುನಾಡಿನಲ್ಲಿ 8 ಪ್ರಕರಣಗಳು 6 ಜಾಮೀನು ರಹಿತ ವಾರಂಟ್‌ಗಳಿವೆ. ಮತ್ತೊಬ್ಬ ಆರೋಪಿ ಭರತ್ ಕೊಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನೆಲ್ಲ ವಶಕ್ಕೆ

ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ರಾಜಾಜಿನಗರದ ಚಿನ್ನದ ಕಂಪನಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ಆರೋಪಿಗಳು ಬಾಯಬಿಟ್ಟಿದ್ದಾರೆ. ನವೆಂಬರ್ ೧೦ ರಂದು ರಾಜಾಜಿನಗರದ ಅಂಗಡಿಯಿಂದ ಆ ಎರಡು ಪದಕಗಳನ್ನು ಮತ್ತು ಹೊಸಕೋಟೆಯ ಬಳಿಯ ಮನೆಯಿಂದ ಇನ್ನುಳಿದ 6 ಪದಕಗಳು, ಒಂದು ಕೊಡವ ಕತ್ತಿ, ಒಲಿಂಪಿಕ್ಸ್ ಬ್ಯಾಗ್ ಹಾಗೂ ಕ್ಯಾಮೆರಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೊಮ್ಮೆ ಒಲಿಂಪಿಕ್ಸ್ ಪದಕ ಗೆದ್ದ ಅನುಭವವಾಗುತ್ತಿದೆ. ಈ ಪದಕಗಳು ರಾಜ್ಯ ಮತ್ತು ದೇಶದ ಗೌರವವಾಗಿದ್ದವು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಪೊಲೀಸ್ ತಂಡಕ್ಕೆ ಧನ್ಯವಾದ ಅರ್ಪಿಸಿದ ಎಂ.ಎಂ. ಸೋಮಯ್ಯ ಹೀಗೆ ಮಾತನಾಡಿದರು, (ಏಜೆನ್ಸೀಸ್).