ಶಿಕ್ಷಕ ಸೇವೆ ಸಾರ್ಥಕ| ವೃತ್ತಿ ಬದುಕಿನಲ್ಲೇ ಸಾರ್ಥಕತೆ ಭಾವ

T 7
Published on

ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.

ವೃತ್ತಿ ಬದುಕಿನಲ್ಲೇ ಸಾರ್ಥಕತೆ ಭಾವ

‘ಸರ್ಕಾರಿ ಶಾಲೆಯಲ್ಲಿ ಅಷ್ಟು ಸರಿಯಾಗಿ ಶಿಕ್ಷಣ ನೀಡಲ್ಲ ಸರ್. ಅದ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತೇವೆ’ ಎಂದಿದ್ದ ನನ್ನ ಕೆಲ ಪರಿಚಿತರು, ಇಂದು ಖಾಸಗಿ ಶಾಲೆ ಬಿಡಿಸಿ ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಿದ್ದಾರೆ. ಇದಕ್ಕಿಂತ ಸಾರ್ಥಕ ಕ್ಷಣ ಬೇರೊಂದಿಲ್ಲ. ನಾನು ಶಿಕ್ಷಕನಾಗಿ 20 ವರ್ಷಗಳಾಗಿವೆ. ಇದುವರೆಗಿನ ಸೇವೆಗಿಂತ ಕರೊನಾ ಸಂದರ್ಭದ ಕೆಲಸದಿಂದ ಜನರಿಗೆ ನಮ್ಮ ಮೇಲೆ ಮೊದಲಿಗಿಂತ ಹೆಚ್ಚು ವಿಶ್ವಾಸ ಮೂಡಿಸಿರುವುದು ಹೆಮ್ಮೆ ಹೆಚ್ಚಿಸಿದೆ. ಇಂಟರ್​ನೆಟ್ ಸೌಲಭ್ಯ ಇರುವ ಮಕ್ಕಳಿಗೆ ವಾಟ್ಸ್​ಆಪ್​ನಲ್ಲಿ ನೋಟ್ಸ್ ಕಳಿಸುತ್ತಿದ್ದೆ. ಇತರ ಮಕ್ಕಳಿಗೆ ಮೊದಲೇ ಯೋಜನೆ ರೂಪಿಸಿಕೊಂಡು ಮನೆಮನೆಗೆ ತೆರಳಿ ಕರೆತರುತ್ತಿದ್ದೆ. ಮನೆಗಳಿಂದ ಮಕ್ಕಳು ಹೊರಬಂದಾಗ ಸೋಂಕು ಬಂದರೆ ಎಂದು ಪಾಲಕರು ಕಳಿಸಲು ಹಿಂದೇಟು ಹಾಕುತ್ತಿದ್ದರು. ಅವರಿಗೆ ತಿಳಿವಳಿಕೆ ನೀಡಿ, ನಾಲ್ಕೈದು ಮಕ್ಕಳನ್ನು ಪರಸ್ಪರ ಅಂತರದಲ್ಲಿ ಕೂಡಿಸಿ ಪಾಠ ಮಾಡುತ್ತಿದ್ದೇನೆ. ಅದರಲ್ಲೂ ಖಾಸಗಿ ಶಾಲೆ ಮಕ್ಕಳು ನಮ್ಮ ಶಾಲೆಗೆ ಬಂದಿದ್ದು ಎಲ್ಲವನ್ನೂ ಮರೆಸಿದೆ.

| ವಿರೂಪಾಕ್ಷಪ್ಪ ಗೋರೇಬಾಳ ಸಹ ಶಿಕ್ಷಕ, ಹೇರೂರು, ಗಂಗಾವತಿ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net