

ಸಾಗರ: ಕ್ಷೇತ್ರದಲ್ಲಿ ಒಂದು ವರ್ಷದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟದೆ. ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 26519 ಮತಗಳ ಲೀಡ್ ನೀಡುವ ಮೂಲಕ ಇದಕ್ಕೆ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಸಾಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಶಾಸಕರ ಕುಮ್ಮಕ್ಕಿನಿಂದ ಸುಳ್ಳು ಕೇಸ್ ಹಾಕುವುದು ಜಾಸ್ತಿಯಾಗುತ್ತಿದೆ. ಅಮಾಯಕರ ವಿರುದ್ಧ ಸುಳ್ಳು ಕೇಸ್ ಹಾಕಿ ತೊಂದರೆ ಕೊಟ್ಟರೆ ತಕ್ಕ ಉತ್ತರ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಸಿರವಂತೆಯಲ್ಲಿ ಗುರುಪ್ರಸಾದ್ ಎಂಬುವವರ ವಿರುದ್ಧ ಗಾಂಜಾ ಕೇಸ್ ಹಾಕುವ ಪ್ರಯತ್ನ ನಡೆಸಲಾಗಿದೆ. ಗೌತಮಪುರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೆನಗೆರೆ ರವಿ ಹೆಗಡೆ ಮೇಲೆ ಹಲ್ಲೆಯಾಗಿದೆ. ಇರುವಕ್ಕಿಯಲ್ಲಿ ಇಬ್ಬರು ಬ್ರಾಹ್ಮಣರ ಜಮೀನಿಗೆ ಬೇಲಿ ಹಾಕಲಾಗಿದೆ. ಮೆಳವರಿಗೆಯಲ್ಲಿ 7 ಜನ ರೈತರನ್ನು ಜೈಲಿಗೆ ಕಳಿಸಲಾಗಿದೆ. ಕೋಟೆಕೊಪ್ಪದಲ್ಲಿ ಸ್ವಾಧೀನದಲ್ಲಿರುವ ಜಮೀನನ್ನು ಕಾಂಗ್ರೆಸ್‌ನ ಪುಡಾರಿಯೊಬ್ಬ ಸ್ವಾಧೀನಪಡಿಸಿಕೊಂಡಿದ್ದಾನೆ. ಕಳೆದ ಒಂದು ವರ್ಷದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ನಮ್ಮ ಪಕ್ಷದ ವಿನೋದ್‌ರಾಜ್ ಮತ್ತು ಅರುಣ ಕುಗ್ವೆ ಅವರನ್ನು ಗಡಿಪಾರು ಮಾಡಲು ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕಿ ಯಶಸ್ವಿಯಾದರು. ಇಂತಹ ಅನೇಕ ಪ್ರಕರಣಗಳು ಕ್ಷೇತ್ರವ್ಯಾಪ್ತಿಯಲ್ಲಿ ನಡೆದಿದ್ದು ಜನರು ದುರಾಡಳಿತದಿಂದ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ನೀಡಿದ್ದಾರೆ. ಸಾಗರ ಕ್ಷೇತ್ರದಲ್ಲಿ ಸುಳ್ಳು ಕೇಸ್ ಹಾಕುತ್ತಿರುವುದರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು.
ಹೊಸನಗರ, ಸಾಗರ, ಜೋಗ-ಕಾರ್ಗಲ್ ಸ್ಥಳೀಯ ಸಂಸ್ಥೆಗಳಿಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ, ಗ್ರಾಮಾಂತರ ಪ್ರದೇಶಗಳಿಗೆ ಎಷ್ಟು ಹಣ ಮಂಜೂರಾಗಿದೆ ಎಂಬುದನ್ನು ಶಾಸಕರು ದಾಖಲೆ ಬಿಡುಗಡೆ ಮಾಡಲಿ. ರಾಜ್ಯದಲ್ಲಿ ಯಾವ ಕ್ಷೇತ್ರಕ್ಕೂ ಸರ್ಕಾರ ಅನುದಾನ ನೀಡಿಲ್ಲ. ಒಂದೊಮ್ಮೆ ಹೊಸ ಅನುದಾನ ತಂದಿದ್ದರೆ ಶಾಸಕರು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಹೆಸರು, ಬಿ.ವೈ.ರಾಘವೇಂದ್ರ ಅವರ ಜನಸ್ನೇಹಿ ವ್ಯಕ್ತಿತ್ವ, ಅಭಿವೃದ್ಧಿಗೆ ಜನರು ಮತ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಎಲ್ಲ ಸ್ತರದ ಘಟಕಗಳು ಬಿ.ವೈ.ರಾಘವೇಂದ್ರ ಗೆಲುವಿಗೆ ಅಹೋರಾತ್ರಿ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಪ್ರಸನ್ನ ಕೆರೆಕೈ, ಮಲ್ಲಿಕಾರ್ಜುನ ಹಕ್ರೆ, ಪ್ರಶಾಂತ್, ದೇವೇಂದ್ರಪ್ಪ, ಕೆ.ಆರ್.ಗಣೇಶಪ್ರಸಾದ್, ರಾಜಶೇಖರ ಗಾಳಿಪುರ, ಗೌತಮ್, ಮಧುರಾ ಶಿವಾನಂದ್, ವಿ.ಮಹೇಶ್, ರಮೇಶ್, ಕೊಟ್ರಪ್ಪ ನೇದರವಳ್ಳಿ, ಬಿ.ಟಿ.ರವೀಂದ್ರ, ಶಿವಪ್ಪ, ಕೃಷ್ಣಮೂರ್ತಿ, ಅರುಣ ಕುಗ್ವೆ, ಸತೀಶ್, ಸಂತೋಷ್ ಇತರರಿದ್ದರು.