ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆ

arrested
Published on

ಬೆಂಗಳೂರು:ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಪಾಲಕರು ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ೭ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಠಾಣೆ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಬಹರ್ ಆಸ್ಮಾ (೩೦) ಆತ್ಮಹತ್ಯೆಗೆ ಶರಣಾದವರು. ಪ್ರಕರಣ ಸಂಬಂಧ ಹೆಬ್ಬಾಳ ಠಾಣೆ ಪೊಲೀಸರು ಆಸ್ಮಾರ ಪತಿ ಬಷೀರ್ ಉಲ್ಲಾನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಜಯನಗರದ ಕಲ್ಯಾಣ ಮಂಟಪದಲ್ಲಿ ೨೦೨೩ರ ಜುಲೈನಲ್ಲಿ ಆಸ್ಮಾ ಮತ್ತು ಬಷೀರ್ ಮದುವೆಯಾಗಿತ್ತು. ಕುಟುಂಬದ ಹಿರಿಯರು ನಿಶ್ಚಯಿಸಿದಂತೆ ಮದುವೆ ನಡೆದಿತ್ತು. ಸುಲ್ತಾನ್‌ಪಾಳ್ಯದ ಬಷೀರ್, ಶ್ಯಾಮಣ್ಣ ಗಾರ್ಡನ್‌ನ ಆಸ್ಮಾ ಅವರನ್ನು ಮದುವೆಯಾಗಿದ್ದ. ಬಳಿಕ ಹೆಬ್ಬಾಳದ ಕನಕನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಆಸ್ಮಾ, ಎಂ.ಎ ಪದವೀಧರೆಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಷೀರ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯ ಉದ್ಯೋಗಿಯಾಗಿದ್ದ. ಏರ್‌ಲೈನ್ಸ್ ಸಂಸ್ಥೆಯ ಕ್ರ್ಯೂ ಸಿಬ್ಬಂದಿಗೆ ಆತ ತರಬೇತಿ ಕೊಡುತ್ತಿದ್ದ. ಸಂಸ್ಥೆಯ ಮಹಿಳಾ ಸಿಬ್ಬಂದಿ ಹಾಗೂ ಗಗನಸಖಿಯರೊಂದಿಗೆ ಆತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಸಂಗತಿ ಆಸ್ಮಾ ಅವರಿಗೆ ಗೊತ್ತಾಗಿ ಆಗಾಗ್ಗೆ ಪತಿಯ ಜತೆ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬಷೀರ್‌ನ ಮೊಬೈಲ್‌ನಲ್ಲಿ ಗಗನಸಖಿಯರ ಜತೆಗಿನ ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ ೆಟೊಗಳು ಇದ್ದವು. ಆಸ್ಮಾ, ಆ ೆಟೊಗಳನ್ನು ನೋಡಿ ಕೋಪಗೊಂಡು ಗಗನಸಖಿಯರ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗ ಬಷೀರ್, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ಇದೇ ವಿಚಾರಕ್ಕೆ ದಂಪತಿ ಮಧ್ಯೆ ಏ.೫ ರಂದು ಗಲಾಟೆಯಾಗಿತ್ತು. ಬಳಿಕ ಆಸ್ಮಾ, ತನ್ನ ಸಹೋದರಿ ಅಮೀನಾಗೆ ಕರೆ ಮಾಡಿ ಪತಿಯು ಹಲ್ಲೆ ನಡೆಸಿರುವ ವಿಚಾರ ತಿಳಿಸಿದ್ದರು. ಅಲ್ಲದೆ, ಪತಿಯು ಗಗನಸಖಿಯರ ಜತೆಗೆ ನಡೆಸಿದ್ದ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಸಹೋದರಿಗೆ ಕಳುಹಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net