

ಬೆಂಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಮಹಿಳೆಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಳಿಮಾವು ಸಮೀಪದ ಅಕ್ಷಯ ನಗರದ ನಿವಾಸಿ ಅನುಷಾ(೨೭) ಮೃತ ಮಹಿಳೆ. ಸೆ.೫ರಂದು ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯ ಮನೆಯ ಬಾತ್‌ರೂಮ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸೆ.೬ರಂದು ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಅನುಷಾರ ಪತಿ ಟೆಕ್ಕಿ ಶ್ರೀಹರಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಶ್ರೀಹರಿಯ ಅನೈತಿಕ ಸಂಬಂಧವೇ ಕಾರಣ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ಶ್ರೀಹರಿ ಮತ್ತು ಅನುಷಾ ೫ ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ೨ ವರ್ಷದ ಮಗು ಇದೆ. ಅಕ್ಷಯನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಶ್ರೀಹರಿ ಮಾರತ್ ಹಳ್ಳಿಯಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅನುಷಾ ಮನೆಯಲ್ಲೇ ಇರುತ್ತಿದ್ದರು. ಈ ಮಧ್ಯೆ ಶ್ರೀಹರಿ ಬೇರೊಬ್ಬ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದು, ಜತೆಗೆ ಮಹಿಳೆಯರ ಜತೆ ವಿಡಿಯೋ ಕಾಲ್, ಅಸಭ್ಯ ಸಂಭಾಷಣೆ ಮಾಡುತ್ತಿದ್ದ. ಈ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಪತ್ನಿ ಮೇಲೆಯೇ ಹಲ್ಲೆ ನಡೆಸುತ್ತಿದ್ದ ಎಂದು ಮೃತಳ ಪಾಲಕರು ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದರು.
ಪತಿಯ ವರ್ತನೆಯನ್ನು ಅನುಷಾ ತನ್ನ ಪಾಲಕರಿಗೆ ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಆದರೆ, ಅನುಷಾ ಪತಿಯೊಂದಿಗೆ ಮಾತಾಡಿ ಸರಿ ಪಡಿಸಿಕೊಳ್ಳುತ್ತೇನೆ ಎಂದು ಪಾಲಕರಿಗೆ ಹೇಳಿದ್ದರು. ಈ ಮಧ್ಯೆ ಸಹೋದ್ಯೋಗಿ ಜತೆ ಅನುಚಿತ ವರ್ತನೆ ಸಂಬಂಧ ಶ್ರೀಹರಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.
ಇನ್ನೊಂದು ಸಂಬಂಧ ಹೊಂದಿದರೆ ತಪ್ಪೇನು?
ಮೂರು ತಿಂಗಳಿಂದ ಮನೆಯಲ್ಲೇ ಇದ್ದ ಶ್ರೀಹರಿ, ಗುರುವಾರ ಪತ್ನಿ ಜತೆ ಜಗಳವಾಡುತ್ತಾ ನಾನು ಇನ್ನೊಂದು ಮದುವೆಯಾದರೆ ತಪ್ಪೇನು? ದರ್ಶನ್ ರೀತಿ ನಾನು ಇನ್ನೊಂದು ಸಂಬಂಧ ಇಟ್ಟುಕೊಂಡರೆ ತಪ್ಪೇನು? ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದರಿಂದ ಬೇಸತ್ತ ಅನುಷಾ ಮನೆಯ ಬಾತ್‌ರೂಮ್‌ನಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಪತ್ನಿ ಬೆಂಕಿ ಹಚ್ಚಿಕೊಂಡಿದ್ದರೂ ಪತಿ ಶ್ರೀಹರಿ ರಕ್ಷಣೆಗೆ ಹೋಗಿಲ್ಲ. ಆಗ ಆಕೆಯ ಜೋರು ಶಬ್ಧ ಕೇಳಿ ನಾನೇ ಪಕ್ಕದ ಮನೆಯರ ರಕ್ಷಣೆ ಕೋರಿದೆ ಎಂದು ಅನುಷಾ ತಾಯಿ ರೇಣುಕಾ ಎಂಬುವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಅನುಷಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೆ.೬ ರಂದು ತಡರಾತ್ರಿ ಅನುಷಾ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.