ಶಾಲೆ ಜಾಗಕ್ಕೆ ಅತಿಕ್ರಮಣ ಭೀತಿ

anr school
Published on

ಆಯನೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಆಯನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜಾಗವನ್ನು ಕೆಲವರು ಒತ್ತುವರಿ ಮಾಡುತ್ತಿದ್ದಾರೆ. ಇದೀಗ ಬ್ರಿಟಿಷರ ಕಾಲದಲ್ಲಿ ಅಂದರೆ 1945ರಲ್ಲಿ ನಿರ್ಮಾಣವಾದ ಶಾಲೆ ಸಮಸ್ಯೆಗೆ ಸಿಲುಕಿದೆ.

ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ನ್ಯಾಯಾಧೀಶರು, ವೈದ್ಯರು, ಅಭಿಯಂತರರು, ವಕೀಲರು, ಶಿಕ್ಷಕರು ಸೇರಿದಂತೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂತಹ ಶಾಲೆಯ ಜಾಗಕ್ಕೆ ಭೂಗಳ್ಳರ ಕಾಟ ಆರಂಭವಾಗಿದೆ. ಹಲವರು ಶಾಲಾ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಮಾಡಿಕೊಳ್ಳುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರಿ ಶಾಲೆ ಆಸ್ತಿ ಉಳಿಸುವಲ್ಲಿ ಅಧಿಕಾರಿಗಳು ಹೊಣೆಗಾರಿಕೆ ಪ್ರದರ್ಶಿಸಬೇಕಿದೆ.

ಆಯನೂರು ಗ್ರಾಮಸ್ಥರಾದ ಅರಸಪ್ಪ ಎಂಬುವವರ ಮಗ ಎ. ವೆಂಕಟಸ್ವಾಮಿ ಎಂಬುವರು ಸರ್ವೇ ನಂ. 65ರಲ್ಲಿ 3 ಎಕರೆ 33 ಗುಂಟೆ ಜಾಗವನ್ನು 1954ರಲ್ಲಿ ಆಯನೂರಿನ ಸರ್ಕಾರಿ ಹಿರಿಯ ಮಾದರಿ ಶಾಲೆಗೆ ದಾನವಾಗಿ ನೀಡಿದ್ದಾರೆ. ಇದರಲ್ಲಿ ತಮಗೆ ಸ್ವಂತಕ್ಕೆ 125 ಅಡಿ ಜಾಗ ಉಳಿಸಿಕೊಂಡಿದ್ದಾರೆ. ಇದಕ್ಕೆ ಚಕ್ಕುಬಂದಿಯೂ ಇದೆ. ದಾನಪತ್ರದಲ್ಲಿಯೂ ಅಳತೆಯನ್ನು ವಿವರಿಸಲಾಗಿದೆ. ಆದರೆ ಇದುವರೆಗೆ ಶಾಲೆಗೆ ನೀಡಿರುವ ಜಾಗದ ಸರ್ವೇ ಆಗಿಲ್ಲ.

ಅತಿಕ್ರಮಣ ಹೆಚ್ಚಳ: ಒತ್ತುವರಿ ಬಗ್ಗೆ ಹಲವಾರು ಬಾರಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ವೇ ಮಾಡದಿರುವುದರಿಂದ ಶಾಲೆಯ ಖಾಲಿ ಜಾಗವನ್ನು ಅತಿಕ್ರಮಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರ ನಡುವೆ ಪದೇಪದೆ ಮಾತುಕತೆ ಹಾಗೂ ವ್ಯಾಜ್ಯ ನಡೆಯುವುದು ಸಾಮಾನ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ವೇ ಮಾಡಿಸಿ, ಹದ್ದುಬಸ್ತು ಮಾಡಿಸಿದರೆ ಅನುಕೂಲವಾಗಲಿದೆ. ಶಾಲೆಯು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವುದರಿಂದ ಶಾಲಾ ಜಾಗವನ್ನು ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದು.

ಈ ಹಿಂದೆ ಶಾಲೆಗೆ ನೀಡಿರುವ ದಾನದ ಜಾಗದಲ್ಲಿಯೇ ಸರ್ಕಾರಿ ಮಹಿಳಾ ವಸತಿ ನಿಲಯ ನಿರ್ಮಿಸಲಾಗಿದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಶಾಲೆ ಪಕ್ಕದಲ್ಲಿಯೇ ಜನರು ಹಾಗೂ ಇಲಾಖೆಯ ಅನುಮತಿಯ ಮೇರೆಗೆ ವಸತಿ ನಿಲಯ ಸ್ಥಾಪಿಸಲಾಗಿದೆ. ಈಗ ಉಳಿದಿರುವ ಜಾಗ ಅತಿಕ್ರಮಣವಾಗುವ ಸಾಧ್ಯತೆಗಳಿವೆ. ಇನ್ನಾದರೂ ಅಧಿಕಾರಿಗಳು ದಾನವಾಗಿ ಬಂದ ಜಾಗವನ್ನು ಸೂಕ್ತ ದಾಖಲಾತಿಗಳೊಂದಿಗೆ ರಕ್ಷಿಸಿಕೊಳ್ಳಬೇಕಾದ ಹೊಣೆಗಾರಿಕೆ ಶಾಲೆಯದ್ದಾಗಿದೆ. ದಾನಿಗಳಿಂದ ಬಂದ ಜಾಗವನ್ನು ಕಾಪಾಡಿಕೊಳ್ಳುವಲ್ಲಿ ಅಧಿಕಾರಿಗಳು, ಶಾಲಾ ಸಿಬ್ಬಂದಿ ಗಮನಹರಿಸಬೇಕಿದೆ.

ಶಾಲೆಯ ಹೆಸರಿಗೆ ಪಹಣಿ ಆಗದೆ ಕೇವಲ ಅರ್ಜಿ ಅಥವಾ ಮನವಿಗಳನ್ನು ಕೊಡುವುದರಿಂದ ಪ್ರಯೋಜನವಿಲ್ಲ. ಆನ್‌ಲೈನ್ ಮೂಲಕ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದರೆ 25ರಿಂದ 30 ದಿನಗಳೊಳಗೆ ಸರ್ವೇ ಮಾಡಿಕೊಡಲಾಗುವುದು ಎಂದು ಶಿವಮೊಗ್ಗ ತಹಸೀಲ್ದಾರ್ ರಾಜೀವ್ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net