ಅಮೆರಿಕ ಅಧ್ಯಕ್ಷರ ಮನೆ ಮೇಲೆ ಎಫ್​ಬಿಐ ದಾಳಿ!; ಜೋ ಬೈಡೆನ್ ನಿವಾಸದಲ್ಲಿ 20 ರಹಸ್ಯ ದಾಖಲೆ ಪತ್ತೆ, ಚುರುಕುಗೊಂಡ ತನಿಖೆ

FBI
Published on

ವಾಷಿಂಗ್ಟನ್: ರಹಸ್ಯ ದಾಖಲೆ ಪತ್ರಗಳ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ಫೆಡರಲ್ ತನಿಖಾ ಸಂಸ್ಥೆ (ಎಫ್​ಬಿಐ) ಅಧ್ಯಕ್ಷ ಜೋ ಬೈಡೆನ್​ರ ನಿವಾಸದ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 20 ಮಹತ್ವದ ವರ್ಗೀಕೃತ ದಾಖಲೆ ಪತ್ರಗಳು ಲಭ್ಯವಾಗಿವೆ. 13 ಗಂಟೆಯಷ್ಟು ದೀರ್ಘ ಕಾಲ ಶೋಧ ನಡೆಸಲಾಗಿದೆ. ಪ್ರಕರಣದ ತನಿಖೆಯನ್ನು ಎಫ್​ಬಿಐ ಬಿರುಸುಗೊಳಿಸಿದೆ. ಇದರಿಂದ 2024ರಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯೋಜಿಸುತ್ತಿರುವ ಬೈಡೆನ್​ಗೆ ರಾಜಕೀಯ ಸಂಕಷ್ಟದ ಜತೆಗೆ ಕಾನೂನಾತ್ಮಕ ತೊಡಕು ಎದುರಾಗುವ ಸಾಧ್ಯತೆ ಇದೆ.

ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೈಡೆನ್ ಸೆನೆಟ್ ಸದಸ್ಯ ಹಾಗೂ ಉಪಾಧ್ಯಕ್ಷರಾಗಿದ್ದರು. ಈ ಅವಧಿಯದ್ದು ಎನ್ನಲಾದ ಕೆಲವು ರಹಸ್ಯ ದಾಖಲೆಪತ್ರಗಳನ್ನು ಕಾನೂನು ಇಲಾಖೆ ವಶಪಡಿಸಿಕೊಂಡಿದೆ ಎಂದು ಅಧ್ಯಕ್ಷರ ವೈಯಕ್ತಿಕ ಅಟಾರ್ನಿ ಬಾಬ್ ಬಾಯರ್ ತಿಳಿಸಿದ್ದಾರೆ.

18 ದಾಖಲೆಗಳು ವಶ: ಶುಕ್ರವಾರ ವಶಪಡಿಸಿಕೊಂಡ ದಾಖಲೆಗಳು ಸೇರಿ ಬೈಡನ್ ಮನೆ, ಕಚೇರಿಗಳಿಂದ ಇದುವರೆಗೆ ಎಫ್​ಬಿಐ ವಶಕ್ಕೆ ಪಡೆದ ದಾಖಲೆಗಳ ಸಂಖ್ಯೆ ಸುಮಾರು 18ಕ್ಕೆ ಏರಿದೆ. 2009ರಿಂದ 2016ರವರೆಗೆ ಉಪಾಧ್ಯಕ್ಷರಾಗಿದ್ದಾಗಿನ ಅವಧಿಯ ಎಲ್ಲ ದಾಖಲೆಗಳನ್ನು ಎಫ್​ಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಪಪ್ರಚಾರ: ಬೈಡೆನ್ ವಿರುದ್ಧ ಅಪಪ್ರಚಾರ ನಡೆಸಲಾಗಿದೆ. ಈ ತಿಂಗಳು ಹೌಸ್ ಆಪ್ ರೆಪ್ರಸೆಂಟೇಟಿವ್ಸ್ (ಸಂಸತ್ತಿನ ಕೆಳಮನೆ) ಮೇಲೆ ನಿಯಂತ್ರಣ ಸಾಧಿಸಿರುವ ರಿಪಬ್ಲಿಕನ್ನರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶ್ವೇತಭವನದ ಕೌನ್ಸೆಲ್ ಕಚೇರಿಯ ವಕ್ತಾರ ಇಯಾನ್ ಸ್ಯಾಮ್್ಸ ಆರೋಪಿಸಿದ್ದಾರೆ. ದಾಖಲೆ ಪತ್ರಗಳ ಸಂಗ್ರಹದ ಕುರಿತು ತಾವೇ ಪ್ರತ್ಯೇಕ ತನಿಖೆ ನಡೆಸುತ್ತೇವೆ ಎಂದು ರಿಪಬ್ಲಿಕನ್ನರು ಇತ್ತೀಚೆಗೆ ಪ್ರಕಟಿಸಿದ್ದರು. ಕಾನೂನು ಇಲಾಖೆ ನೇಮಿಸಿದ ವಿಶೇಷ ಕೌನ್ಸೆಲ್​ರ ತನಿಖೆಗೆ ಹೆಚ್ಚುವರಿಯಾಗಿ ತಾವೂ ತನಿಖೆ ನಡೆಸುವುದಾಗಿ ಹೇಳಿದ್ದರು.

ಆರೋಪ ಇದೇ ಮೊದಲಲ್ಲ: 2020ರಲ್ಲಿ ಬೈಡೆನ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಲೈಂಗಿಕ ಕಿರುಕುಳ, ಸ್ವಜನಪಕ್ಷಪಾತ ಮತ್ತು ಆರೋಪಗಳು ಕೇಳಿಬಂದಿದ್ದವು. 1993ರಲ್ಲಿ ಸೆನೆಟ್ ಸದಸ್ಯರಾಗಿದ್ದ ಬೈಡೆನ್ ಕ್ಯಾಪಿಟಲ್ ಹಿಲ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದರೆಂದು ಅವರ ಕಚೇರಿ ಸಿಬ್ಬಂದಿಯಾಗಿದ್ದ ತಾರಾ ರೀಡ್ ಆರೋಪಿಸಿದ್ದರು. ಮಗ ಹಂಟರ್ ಬೈಡೆನ್​ರ ಬಿಜಿನೆಸ್​ಗೆ ಅನುಕೂಲ ಮಾಡಿಕೊಡಲು ಅಧಿಕಾರ ದುರುಪಯೋಗ ಮತ್ತು ಮಗನ ವ್ಯವಹಾರದ ಕುರಿತು ತನಿಖೆ ನಡೆಸದಂತೆ ಯೂಕ್ರೇನ್ ಅಧ್ಯಕ್ಷರ ಮೇಲೆ ಒತ್ತಡ ಹಾಕಿದ್ದರು ಎಂದು ದೂರಲಾಗಿತ್ತು.

ನಾನು ಉಪಾಧ್ಯಕ್ಷನಾಗಿದ್ದ ಅವಧಿಯದ್ದೆಂದು ಹೇಳಲಾದ ರಹಸ್ಯ ದಾಖಲೆ ಪತ್ರಗಳಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಮನೆಯಲ್ಲಿ ಈ ದಾಖಲೆಪತ್ರಗಳು ಸಿಕ್ಕ ಬಗ್ಗೆ ಅಚ್ಚರಿಯೂ ಆಗಿದೆ. | ಜೋ ಬೈಡೆನ್ ಅಮೆರಿಕ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net