ರಾಜ್ಯದಲ್ಲಿ ಸಿಡಿಲಬ್ಬರ: ತಂದೆ-ಮಗ ಸೇರಿ ಮೂವರ ಸಾವು; ನಾಲ್ಕು ಮೇಕೆಗಳೂ ಬಲಿ..

Sidilu
Published on

ಕಲಬುರಗಿ/ಬಾಗಲಕೋಟೆ: ರಾಜ್ಯದಲ್ಲಿ ಸಿಡಿಲು ಅಬ್ಬರಿಸಲಾರಂಭಿಸಿದ್ದು, ಸಿಡಿಲ ಹೊಡೆತಕ್ಕೆ ತಂದೆ-ಮಗ ಸೇರಿ ಮೂವರು ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ ನಾಲ್ಕು ಮೇಕೆಗಳೂ ಸಿಡಿಲಿಗೆ ಬಲಿಯಾಗಿವೆ. ಕಲಬುರಗಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಪ್ರಕರಣಗಳು ನಡೆದಿವೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಡಚರ್ಲಾ ಗ್ರಾಮದಲ್ಲಿ ತುಳಜಾ ನಾಯಕ ರಾಠೋಡ್ (40) ಹಾಗೂ ಈತನ ಪುತ್ರ ಅವೀನ್ ರಾಠೋಡ್ (16) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಇವರು ಸೇಡಂ ತಾಲೂಕಿನ ಪಿಲ್ಲಿಗುಂಟ ತಾಂಡಾದ ನಿವಾಸಿಗಳು. ಕೂಲಿ ಕೆಲಸಕ್ಕೆ ಹೋಗಿದ್ದಾಗ ಇಂದು ಸಂಜೆ ಸಿಡಿಲು ಬಡಿದಿದ್ದು, ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯಲ್ಲೂ ಮಳೆ ಜತೆ ಸಿಡಿಲು ಅಬ್ಬರಿಸುತ್ತಿದ್ದು, ಯುವಕನೊಬ್ಬ ಬಲಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚಗಲ್ ಗ್ರಾಮದಲ್ಲಿ ಕೃಷ್ಣಪ್ಪ ಗುಡದನ್ನವರ (30) ಎಂಬಾತ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಲೋಕಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದಲ್ಲಿ ಮಂಜಪ್ಪ ಗಚ್ಚಪ್ಪ ಕರಡಿ ಎಂಬುವರಿಗೆ ಸೇರಿದ ನಾಲ್ಕು ಮೇಕೆಗಳು ಸಿಡಿಲಿಗೆ ಬಲಿಯಾಗಿವೆ. ಇವರ 30ಕ್ಕೂ ಹೆಚ್ಚು ಮೇಕೆಗಳು ಗ್ರಾಮದ ಪಕ್ಕದ ಗುಡ್ಡದಲ್ಲಿ ಮೇಯುತ್ತಿದ್ದಾಗ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net